ಕಾಲ್ತುಳಿತ ದುರಂತಕ್ಕೆ ಪೊಲೀಸರ ಹೊಣೆ ಮಾಡಿದ್ದ ಸರ್ಕಾರಕ್ಕೆ ಮುಖಭಂಗ; ಎಸಿಪಿ ವಿಕಾಸ್ ಕುಮಾರ್ ಅಮಾನತು ಆದೇಶ ರದ್ದುಪಡಿಸಿದ ಸಿಎಟಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ಕರ್ತವ್ಯಲೋಪ ಆರೋಪದಲ್ಲಿ ಐವರು ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಿದ್ದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದೆ.

ಬೆಂಗಳೂರು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರ್ಕಾರ ಜೂನ್ 5ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿರುವ ಕೇಂದ್ರೀಯ ಆಡಳಿತ ನ್ಯಾಯಾಧಿಕರಣ (ಸಿಎಟಿ), ವಿಕಾಸ್‌ ಕುಮಾರ್ ವಿಕಾಸ್‌ ಅವರನ್ನು ಸೇವೆ ಮರು ನೇಮಕ ಮಾಡಬೇಕು. ಅಮಾನತು ಅವಧಿಯನ್ನು ಪೂರ್ಣವೇತನ ಮತ್ತು ಭತ್ಯೆಗಳೊಂದಿಗೆ ಕರ್ತವ್ಯವೆಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಅಮಾನತು ಆದೇಶ ರದ್ದು ಕೋರಿ ವಿಕಾಸ್ ಕುಮಾರ್ ವಿಕಾಸ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಸಿಎಟಿಯ ನ್ಯಾಯಾಂಗ ಸದಸ್ಯ ಬಿ.ಕೆ. ಶ್ರೀವಾತ್ಸವ ಮತ್ತು ಆಡಳಿತಾತ್ಮಕ ಸದಸ್ಯ ಸಂತೋಷ್‌ ಮೆಹ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಇದೇ ಪ್ರಕರಣದಲ್ಲಿ ಅಮಾನತುಗೊಂಡಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಬಿ.ದಯಾನಂದ್‌, ಕೇಂದ್ರ ವಿಭಾಗದ ಉಪ ಪೊಲೀಸ್‌ ಆಯುಕ್ತ (ಡಿಸಿಪಿ) ಶೇಖರ್‌ ಎಚ್‌. ಟೆಕ್ಕಣ್ಣನವರ್‌, ಕಬ್ಬನ್‌ಪಾರ್ಕ್‌ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ಸಿ.ಬಾಲಕೃಷ್ಣ ಮತ್ತು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎ.ಕೆ. ಗಿರೀಶ್‌ ಕುಮಾರ್‌ ಅವರಿಗೆ ಈ ಆದೇಶದ ಪ್ರಯೋಜನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಸಿಎಟಿ ಹೇಳಿದೆ.

ಘಟನೆಗೆ ಆರ್‌ಸಿಬಿಯೇ ಕಾರಣ:
ಕಾಲ್ತುಳಿತ ಸಂಭವಿಸಲು ಅರ್ಜಿದಾರರು ಸೇರಿ ಅಮಾನತುಗೊಂಡ ಇತರ ಪೊಲೀಸ್‌ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿರುವ ಸಿಎಟಿ, ಇಡೀ ಪ್ರಕರಣಕ್ಕೆ ಆರ್‌ಸಿಬಿಐ ಹೊಣೆ ಎಂದು ಸ್ಪಷ್ಟವಾಗಿ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿಂದ ವಿಜಯೋತ್ಸವಕ್ಕೆ 3ರಿಂದ 5 ಲಕ್ಷ ಜನ ಸೇರಿದಕ್ಕೆ ಆರ್‌ಸಿಬಿಯೇ ಜವಾಬ್ದಾರಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಜಯೋತ್ಸವ ಆಚರಿಸಲು ಆರ್‌ಸಿಬಿ ಪೊಲೀಸರಿಂದ ಅನುಮತಿ ಮತ್ತು ಒಪ್ಪಿಗೆ ಪಡೆದಿರಲಿಲ್ಲ ಎನ್ನುವುದು ತಿಳಿದುಬಂದಿದೆ ಎಂದು ಸಿಎಟಿ ಹೇಳಿದೆ.

ಕಾರ್ಯಕ್ರಮ ಆಯೋಜಿಸುವ ಬಗ್ಗೆ ಆರ್‌ಸಿಬಿ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಪೋಸ್ಟ್‌ ಹಾಕಿತು. ಆ ಮಾಹಿತಿಯೇ ಸಾರ್ವಜನಿಕರು ಸೇರಲು ಕಾರಣವಾಯಿತು. ಜೂನ್ 3ರಂದು ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದಿತ್ತು. ಕಾಲಾವಕಾಶ ಕೊರತೆಯಿಂದ ಜೂನ್ 4ರಂದು ವಿಜಯೋತ್ಸವಕ್ಕೆ ಸಮರ್ಪಕವಾಗಿ ಸಿದ್ಧತೆ ನಡೆಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಸಿದ್ಧತೆ ನಡಸಲು ಪೊಲೀಸರಿಗೆ ಸೂಕ್ತ ಕಾಲಾವಕಾಶ ನೀಡಿಲ್ಲ. ಫೈನಲ್ ಪಂದ್ಯ ಮುಗಿದ ಬಳಿಕ ಇಡೀ ರಾತ್ರಿ ಸಾರ್ವಜನಿಕರು ಬೀದಿಯಲ್ಲಿ ವಿಜಯೋತ್ಸವ ನಡೆಸುತ್ತಿದ್ದರು. ಸಾರ್ವಜನಿಕರ ನಿರ್ವಹಣೆಯಲ್ಲಿ ಪೊಲೀಸ್ ವ್ಯವಸ್ಥೆ ನಿರತವಾಗಿತ್ತು. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ರಾಜ್ಯ ಸರ್ಕಾರ ಮತ್ತೊಂದು ಕಾರ್ಯಕ್ರಮ ಆಯೋಜಿಸಿತ್ತು. ವಿಧಾನಸೌಧಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಆರ್‌ಸಿಬಿ ಉಪದ್ರ ಸೃಷ್ಟಿಸಿದೆ ಎಂದು ಸಿಎಟಿ ಹೇಳಿದೆ.

ಪೊಲೀಸರೇನು ಜಾದೂಗಾರರಲ್ಲ:
ಪೊಲೀಸರು 12 ಗಂಟೆಗಳ ಕಡಿಮೆ ಸಮಯದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಪೊಲೀಸರು ಸಹ ಮನುಷ್ಯರೇ. ಅವರೇನು ದೇವರು ಅಥವಾ ಜಾದೂಗಾರರಲ್ಲ. ಅಲ್ಲಾವುದ್ದೀನ್‌ ಅದ್ಭುತ ದೀಪದಂತೆ ಜಾದೂ ಮಾಡುವ ಶಕ್ತಿಯನ್ನು ಅವರು ಹೊಂದಿಲ್ಲ. ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಸೇರುವುದನ್ನು ನಿಯಂತ್ರಿಸಲು ಪೊಲೀಸರಿಗೆ ಸೂಕ್ತ ಸಮಯ ನೀಡಬೇಕು. ಆದರೆ, ಸೂಕ್ತ ವ್ಯವಸ್ಥೆ ಕಲ್ಪಿಸಲು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಪೋಲೀಸರ ಅನುಮತಿಗಾಗಿ ಅರ್ಜಿ ಸಲ್ಲಿಸಿಲ್ಲ ಅಥವಾ ಪೊಲೀಸರು ಅನುಮತಿಯೂ ನೀಡಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಮಾನತು ಆದೇಶ ರದ್ದು:
ಕೆಎಸ್‌ಸಿಎ ಪೊಲೀಸರಿಗೆ ಬರೆದಿರುವ ಪ್ರತ್ರದಲ್ಲಿ ಸಹ ಅನುಮತಿ ಮಂಜೂರು ಮಾಡಿದ ಅಥವಾ ಸಿದ್ಧತೆ ನಡೆಸುವುದಕ್ಕೆ ಮನವಿ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತ್ರವು ಕೇವಲ ವಿಜಯೋತ್ಸವ ನಡೆಸುವ ಉದ್ದೇಶವನ್ನು ಸಾದರಪಡಿಸುತ್ತದೆ. ಪೊಲೀಸ್‌ ಠಾಣಾಧಿಕಾರಿಗೆ ಪತ್ರ ಸಲ್ಲಿಸಿದ ಮಾತ್ರಕ್ಕೆ ಪೊಲೀಸರು ದಿಢೀರ್‌ ಆಗಿ ಎಲ್ಲ ಸಿದ್ಧತೆಗಳನ್ನು ಮಾಡುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕರ್ತವ್ಯ ಲೋಪದ ಆಧಾರದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸುವಾಗ ಸೂಕ್ತ ದಾಖಲೆ/ಆಧಾರಗಳು ಇರಲಿಲ್ಲ ಎಂಬುದು ಕಂಡಬುರುತ್ತದೆ. ಆದ್ದರಿಂದ, ಸರ್ಕಾರದ ಆದೇಶ ಸಮಂಸವಾಗಿಲ್ಲ. ಆದ್ದರಿಂದ, ಅರ್ಜಿದಾರರನ್ನು ಸೇವೆಯಿಂದ ಅಮಾನತುಪಡಿಸಿದ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ಸಿಎಟಿ ಆದೇಶದಲ್ಲಿ ಹೇಳಲಾಗಿದೆ.

ಸರ್ಕಾರದಿಂದ ಮೇಲ್ಮನವಿ??
ಈ ಮಧ್ಯೆ, ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಬುಧವಾರವೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ರಾಜ್ಯ ಅಡ್ವೋಕೇಟ್‌ ಜನರಲ್‌ ಕಚೇರಿಯು ಈಗಾಗಲೇ ಮೇಲ್ಮನವಿಯ ಕರಡು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ (ಗೃಹ ಇಲಾಖೆ, ಸಿಬ್ಬಂದಿ ಹಾಗೂ ಆಡಳಿತ ಇಲಾಖೆ) ಕಳುಹಿಸಿದೆ. ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಸಿಎಟಿ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆ ಕೋರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related Articles

Comments (0)

Leave a Comment