- ಟ್ರಯಲ್ ಕೋರ್ಟ್
- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 8
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 58.67 ಲಕ್ಷ ಪ್ರಕರಣ ಇತ್ಯರ್ಥ; 2,878 ಕೋಟಿ ರೂ. ಪರಿಹಾರ
- by Jagan Ramesh
- July 15, 2025
- 34 Views

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ರಾಜ್ಯದಾದ್ಯಂತ ಜುಲೈ 12ರಂದು ನಡೆದ ಈ ವರ್ಷದ ಎರಡನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳೂ ಸೇರಿ 58.67 ಲಕ್ಷ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಸಂಬಂಧಪಟ್ಟವರಿಗೆ 2,878 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ಹೈಕೋರ್ಟ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಎಲ್‌ಎಸ್‌ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.
ಲೋಕ ಅದಾಲತ್‌ಗಾಗಿ ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠದಲ್ಲಿ 13, ಧಾರವಾಡ ಪೀಠದಲ್ಲಿ 4, ಕಲಬುರಗಿಯ ಪೀಠದಲ್ಲಿ 3 ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,002 ಪೀಠಗಳು ಸೇರಿ ಒಟ್ಟು 1,022 ಪೀಠಗಳನ್ನು ಸ್ಥಾಪಿಸಲಾಗಿತ್ತು. ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಬಾಕಿ ಇದ್ದ ಒಟ್ಟು 1,182 ಪ್ರಕರಣಗಳು ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿದ್ದ 3,09,995 ಪ್ರಕರಣಗಳು ಸೇರಿ ಒಟ್ಟು 3,11,177 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಜತೆಗೆ 55,56,255 ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಅದಾಲತ್‌ನಲ್ಲಿ ವಿಲೇವಾರಿ ಮಾಡಲಾಗಿದ್ದು, ಒಟ್ಟಾರೆ ಅತಿ ಹೆಚ್ಚು ಅಂದರೆ, 58,67,432 ಪ್ರಕರಣಗಳನ್ನು ಈ ಬಾರಿಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗಿದೆ. ಕೋರ್ಟ್‌ಗಳಲ್ಲಿ ಬಾಕಿ ಇದ್ದ 3.11ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾದರೆ 1,152 ನ್ಯಾಯಾಧೀಶರು 68 ದಿನ ಕಾರ್ಯನಿರ್ವಹಿಸಬೇಕಾಗುತ್ತಿತ್ತು. ಮುಂದಿನ ರಾಷ್ಟ್ರೀಯ ಲೋಕ ಅದಾಲತ್ ಸೆಪ್ಟೆಂಬರ್ 13ರಂದು ರಾಜ್ಯಾದ್ಯಂತ ನಡೆಯಲಿದೆ ಎಂದು ವಿ. ಕಾಮೇಶ್ವರ ರಾವ್ ಅವರು ತಿಳಿಸಿದರು.
ಈ ಬಾರಿಯ ಅದಾಲತ್‌ನ ವಿಶೇಷತೆಗಳು:
- 1,756 ವೈವಾಹಿಕ ಪ್ರಕರಣಗಳ ಇತ್ಯರ್ಥ, ಒಟ್ಟು 331 ದಂಪತಿಗಳು ರಾಜೀ ಸಂಧಾನದ ಮೂಲಕ ಒಂದಾಗಿ, ಸಹಜೀವನ ನಡೆಸಲು ನಿರ್ಧಾರ.
- 4,015 ವಿಭಾಗ ದಾವೆ (ಪಾರ್ಟಿಷನ್ ಸೂಟ್) ಇತ್ಯರ್ಥ; 4,961 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥ; ಸಂತ್ರಸ್ತರಿಗೆ 290 ಕೋಟಿ ರೂ. ಪರಿಹಾರ.
- 13,542 ಚೆಕ್ ಬೌನ್ಸ್ ಪ್ರಕರಣಗಳು 572 ಕೋಟಿ ರೂ. ಪರಿಹಾರ ಮೊತ್ತಕ್ಕೆ ವಿಲೇವಾರಿ.
- 456 ಎಲ್‌ಎಸಿ ಅಮಲ್ಜಾರಿ ಪ್ರಕರಣಗಳ ಇತ್ಯರ್ಥ, 64 ಕೋಟಿ ಪರಿಹಾರ. 912 ಎಂವಿಸಿ ಅಮಲ್ಜಾರಿ ಪ್ರಕರಣಗಳು 121 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥ. 4,430 ಇತರ ಅಮಲ್ಜಾರಿ ಪ್ರಕರಣಗಳ ಉ 170 ಕೋಟಿ ರೂ. ಪರಿಹಾರ ಮೊತ್ತಕ್ಕೆ ವಿಲೇವಾರಿ.
- 21 ರೇರಾ ಪ್ರಕರಣಗಳ ವಿಲೇವಾರಿ, 91 ಲಕ್ಷ ಇತ್ಯರ್ಥ ಮೊತ್ತ. ಸಾಲ ವಸೂಲಾತಿ ನ್ಯಾಯಮಂಡಳಿಯ 90 ಪ್ರಕರಣಗಳು 28 ಕೋಟಿ ರೂ. ಪರಿಹಾರ ಮೊತ್ತಕ್ಕೆ ಇತ್ಯರ್ಥ.
- 1,510 ಹಿರಿಯ ನಾಗರಿಕರ ಪ್ರಕರಣಗಳ ವಿಲೇವಾರಿ.
- 375 ಗ್ರಾಹಕ ವ್ಯಾಜ್ಯಗಳ ಇತ್ಯರ್ಥ, 406 ಕೋಟಿ ರೂ. ಪರಿಹಾರ.
- 5 ವರ್ಷಕ್ಕೂ ಹಳೆಯ 2,377 ಪ್ರಕರಣಗಳು, 10 ವರ್ಷಕ್ಕೂ ಹಳೆಯ 275 ಹಾಗೂ 15 ವರ್ಷಕ್ಕೂ ಹಳೆಯ 38 ಪ್ರಕರಣ ಸೇರಿ ಒಟ್ಟು 2,689 ಹಳೆಯ ಪ್ರಕರಣಗಳ ಇತ್ಯರ್ಥ.
- ರಾಜಿ ಸಂಧಾನದ ಮೂಲಕ ಬೆಂಗಳೂರಿನ 8ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿದ್ದ 28 ವರ್ಷ ಹಾಗೂ 27 ವರ್ಷಗಳಷ್ಟು ಹಳೆಯದಾದ ಕ್ರಿಮಿನಲ್ ಪ್ರಕರಣ ವಿಲೇವಾರಿ.
- ಬೆಂಗಳೂರು ನಗರ ಜಿಲ್ಲೆಯಲ್ಲಿ 1.75 ಕೋಟಿ ಮೊತ್ತದ ಒಂದು ಎಂವಿಸಿ, 6.56 ಕೋಟಿ ಮೊತ್ತದ ಒಂದು ಹಾಗೂ 5.15 ಕೋಟಿ ಮೊತ್ತದ ಮತ್ತೊಂದು ಚೆಕ್ ಅಮಾನ್ಯ ಪ್ರಕರಣಗಳ ಇತ್ಯರ್ಥ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ 40.66 ಕೋಟಿ ಪರಿಹಾರದ ಅಸಲು ದಾವೆ ಇತ್ಯರ್ಥ.
Related Articles
Thank you for your comment. It is awaiting moderation.
Comments (0)