ನಟ ದರ್ಶನ್, ಪವಿತ್ರಾ ಗೌಡ ಜಾಮೀನು ರದ್ದು; ಸುಪ್ರೀಂಕೋರ್ಟ್ ನೀಡಿದ ಕಾರಣಗಳೇನು?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜತೆಗೆ, ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸುಪ್ರೀಂಕೋರ್ಟ್ ಆದೇಶಿಸಿದ್ದು, 8 ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ದರ್ಶನ್ ಮತ್ತೆ ಜೈಲು ಪಾಲಾಗುವಂತಾಗಿದೆ.

ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ 2024ರ ಡಿಸೆಂಬರ್‌ 13ರಂದು ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

ಕರ್ನಾಟಕ ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿರುವ ಸುಪ್ರೀಕೋರ್ಟ್, ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿ, ಆರೋಪಿಗಳಿಗೆ ಮಂಜೂರು ಮಾಡಲಾಗಿದ್ದ ಜಾಮೀನು ರದ್ದುಪಡಿಸಿದೆ. ದರ್ಶನ್, ಪವಿತ್ರಾ ಗೌಡ ಜತೆಗೆ ಇತರ ಆರೋಪಿಗಳಾದ ನಾಗರಾಜು ಆರ್., ಅನು ಕುಮಾರ್ @ ಅನು, ಲಕ್ಷ್ಮಣ್ ಎಂ., ಜಗದೀಶ್ @ ಜಗ್ಗ ಹಾಗೂ ಪ್ರದೂಷ್ ಎಸ್. ರಾವ್ @ ಪ್ರದೂಷ್ ಜಾಮೀನು ಸಹ ರದ್ದಾಗಿವೆ.

ಜಾಮೀನು ರದ್ದತಿಗೆ ಸುಪ್ರೀಂ ನೀಡಿದ ಕಾರಣಗಳು:
• ಜಾಮೀನು ಮಂಜೂರು ಹಾಗೂ ರದ್ದತಿ ಸೇರಿ ಎಲ್ಲ ಅಂಶಗಳನ್ನೂ ನಾವು ಪರಿಗಣಿಸಿದ್ದೇವೆ. ಹೈಕೋರ್ಟ್‌ ಆದೇಶವು ಗಂಭೀರ ಕಾನೂನು ದೌರ್ಬಲ್ಯಗಳಿಂದ ಕೂಡಿದೆ ಎಂಬುದು ಸ್ಪಷ್ಟವಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 34ರ (ಒಂದೇ ಉದ್ದೇಶದಿಂದ ಹಲವರಿಂದ ಅಪರಾಧ ಕೃತ್ಯ) ಅಡಿಯಲ್ಲಿ ಜಾಮೀನು ನೀಡಲು ಯಾವುದೇ ವಿಶೇಷ ಅಥವಾ ಸ್ಪಷ್ಟ ಕಾರಣಗಳನ್ನು ದಾಖಲಿಸಲು ಹೈಕೋರ್ಟ್ ವಿಫಲವಾಗಿದೆ.

• ಹೈಕೋರ್ಟ್ ಯಾಂತ್ರಿಕವಾಗಿ ತನ್ನ ಅಧಿಕಾರ ಬಳಕೆ ಮಾಡಿದೆ. ಕಾನೂನಾತ್ಮಕವಾಗಿ ಬಹುಮುಖ್ಯವಾದ ವಾಸ್ತವಾಂಶಗಳನ್ನು ಕೈಬಿಟ್ಟಿದೆ. ಹೈಕೋರ್ಟ್‌ ಜಾಮೀನು ನೀಡುವಾಗ ವಿಚಾರಣೆಯ ಪೂರ್ವಹಂತದಲ್ಲಿರುವ ಸಾಕ್ಷಿಗಳ ಹೇಳಿಕೆಗಳ ವ್ಯಾಪಕ ಪರೀಕ್ಷೆ ಕೈಗೊಂಡಿದ್ದು, ವಿರೋಧಾಭಾಸ ಹಾಗೂ ವಿಳಂಬಗಳನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದೆ. ಆದರೆ, ಇವೆಲ್ಲ ವಿಚಾರಣಾ ನ್ಯಾಯಾಲಯ ಪಾಟಿ ಸವಾಲಿನ ವೇಳೆ ನಿರ್ಣಯಿಸಬಹುದಾದ ವಿಷಯಗಳಾಗಿವೆ. ಸಾಕ್ಷಿಗಳ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯ ಮೌಲ್ಯಮಾಪನ ನಡೆಸಲು ವಿಚಾರಣಾ ನ್ಯಾಯಾಲಯ ಮಾತ್ರ ಸೂಕ್ತ ವೇದಿಕೆಯಾಗಿದೆ.

• ಅಪರಾಧದ ಸ್ವರೂಪ, ಗಂಭೀರತೆ, ಆರೋಪಿಯ ಪಾತ್ರ, ವಿಚಾರಣೆಯಲ್ಲಿನ ಸ್ಪಷ್ಟ ಹಸ್ತಕ್ಷೇಪವನ್ನು ಪರಿಗಣಿಸದೆ ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವುದು ವಿವೇಚನಾರಹಿತ ಕ್ರಮವಾಗಿದೆ. ಸಾಕ್ಷಿಗಳ ವ್ಯಾಖ್ಯಾನ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಆರೋಪಿಗಳ ಜಾಮೀನು ರದ್ದತಿಯ ಅಗತ್ಯತೆಗೆ ಮತ್ತಷ್ಟು ಪುಷ್ಟಿ ನೀಡುತ್ತವೆ.

• ಆಕ್ಷೇಪಾರ್ಹ ಆದೇಶದ ಮೂಲಕ ಕಲ್ಪಿಸಿರುವ ಸ್ವಾತಂತ್ರ್ಯವು ನ್ಯಾಯದಾನಕ್ಕೆ ನೈಜ ಮತ್ತು ಪ್ರಬಲವಾದ ಬೆದರಿಕೆಯೊಡ್ಡುತ್ತದೆ. ಇದು ವಿಚಾರಣಾ ಪ್ರಕ್ರಿಯೆಯನ್ನು ದಾರಿತಪ್ಪಿಸುತ್ತದೆ. ಈ ನೆಲೆಯಲ್ಲಿ ಹಾಲಿ ಪ್ರಕರಣದಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 439 (1) ಅಡಿ ಲಭ್ಯವಾಗಿರುವ ವ್ಯಾಪ್ತಿಯ ಹಕ್ಕನ್ನು ಚಲಾಯಿಸುವುದು ಅಗತ್ಯವಾಗಿದೆ.

• ಕಾನೂನಿನ ಅಡಿ ಸ್ಥಾಪಿತವಾದ ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯಕ್ತಿ ತನ್ನ ಸಾಮಾಜಿಕ ಸ್ಥಾನಮಾನದ ಪ್ರಭಾವದಿಂದ ಕಾನೂನು ಮತ್ತು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು. ಸಂವಿಧಾನದ 14ನೇ ಪರಿಚ್ಛೇದವು ಕಾನೂನಿನ ಅಡಿ ಎಲ್ಲರೂ ಸಮಾನರು ಎಂಬುದನ್ನು ಖಾತ್ರಿಪಡಿಸಿದ್ದು, ಸ್ವೇಚ್ಛೆಯನ್ನು ನಿಷೇಧಿಸುತ್ತದೆ. ಯಾವುದೇ ವ್ಯಕ್ತಿಯು ತನ್ನ ಜನಪ್ರಿಯತೆ, ಅಧಿಕಾರ, ವಿಶೇಷ ಸ್ಥಾನಮಾನಗಳ ಹೊರತಾಗಿ ಕಾನೂನಿಗೆ ಒಳಪಟ್ಟಿರುತ್ತಾರೆ.

ತಕ್ಷಣವೇ ವಶಕ್ಕೆ ಪಡೆಯಲು ಆದೇಶ:
ಈ ಎಲ್ಲ ಕಾರಣಗಳಿಂದ, ಮೇಲ್ಮನವಿಗಳನ್ನು ಮಾನ್ಯ ಮಾಡಲಾಗಿದ್ದು, 2024ರ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಆದೇಶ ಹಾಗೂ ಆರೋಪಿಗಳಿಗೆ ನೀಡಲಾದ ಜಾಮೀನು ರದ್ದುಗೊಳಿಸಲಾಗಿದೆ. ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು ಮತ್ತು ಕಾನೂನಿನ ಪ್ರಕಾರ ಅರ್ಹತೆಗಳ ಆಧಾರದ ಮೇಲೆ ತೀರ್ಪು ನೀಡಬೇಕು. ಈ ತೀರ್ಪಿನಲ್ಲಿ ಮಾಡಲಾದ ಅವಲೋಕನಗಳು ಕೇವಲ ಜಾಮೀನು ವಿಚಾರಕ್ಕೆ ಸೀಮಿತವಾಗಿವೆ, ಪ್ರಕರಣದ ವಿಚಾರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಮಹತ್ವಪೂರ್ಣ ತೀರ್ಪು:
ತೀರ್ಪು ಪ್ರಕಟಿಸಿದ ಬಳಿಕ ಮಾತನಾಡಿದ ನ್ಯಾಯಮೂರ್ತಿ ಪಾರ್ದಿವಾಲಾ ಅವರು, ಈ ತೀರ್ಪು ಒಂದು ‘ಲ್ಯಾಂಡ್‌ಮಾರ್ಕ್’ ಎನಿಸಿಕೊಳ್ಳಲಿದೆ. ನನ್ನ ಸಹೋದ್ಯೋಗಿ ನ್ಯಾಯಮೂರ್ತಿ ಆರ್. ಮಹಾದೇವನ್ ಅವರು, ಬಹಳ ಪ್ರೌಢಿಮೆಯ ತೀರ್ಪನ್ನು ನೀಡಿದ್ದಾರೆ. ಆರೋಪಿ ಯಾರೇ ಆಗಿರಲಿ, ಎಷ್ಟೇ ದೊಡ್ಡವನಿರಲಿ ಅಥವಾ ಚಿಕ್ಕವನಿರಲಿ, ಅವನು ಅಥವಾ ಅವಳು ಕಾನೂನಿಗಿಂತ ಮಿಗಿಲಲ್ಲ ಎಂಬ ಬಲವಾದ ಸಂದೇಶವನ್ನು ಈ ತೀರ್ಪು ನೀಡುತ್ತದೆ. ನ್ಯಾಯದಾನ ವ್ಯವಸ್ಥೆಯು ಯಾವುದೇ ಹಂತದಲ್ಲಿ, ಯಾವುದೇ ಬೆಲೆ ತೆತ್ತಾದರೂ ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿಯಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವ ವ್ಯಕ್ತಿಯೂ ಕಾನೂನಿಗಿಂತ ಮಿಗಿಲಲ್ಲ ಅಥವಾ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಕಾನೂನಿಗೆ ವಿಧೇಯರಾಗುವುದನ್ನು ಹಕ್ಕಾಗಿ ಕೇಳಲಾಗುತ್ತದೆಯೇ ಹೊರತು ಔದಾರ್ಯಕ್ಕಾಗಿ ಕೇಳುವುದಿಲ್ಲ. ಎಲ್ಲ ಸಮಯದಲ್ಲೂ ಕಾನೂನನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ತೀರ್ಪಿನ ಕುರಿತಾಗಿ ಹೇಳಿದರು.

Related Articles

Comments (0)

Leave a Comment