ನಿರ್ಮಾಪಕ ಆನಂದ್ ಅಪ್ಪುಗೋಳ್‌ಗೆ ಸುಪ್ರೀಂಕೋರ್ಟ್ ಜಾಮೀನು; ಠೇವಣಿದಾರರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪ

ನವದೆಹಲಿ: ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಅರ್ಬನ್‌ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಆನಂದ್‌ ಬಾಲಕೃಷ್ಣ ಅಪ್ಪುಗೋಳ್‌‌ಗೆ ಸುಪ್ರೀಂಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ನಟ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರದ ನಿರ್ಮಾಪಕರೂ ಆದ ಆನಂದ್ ಅಪ್ಪುಗೋಳ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದೆ. ವಿಸ್ತೃತ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರ ಆನಂದ್ ಅಪ್ಪುಗೋಳ್ ಪರವಾಗಿ ವಕೀಲ ಜಿ.ಎಂ. ಗಾದಿಲಿಂಗಪ್ಪ ವಾದ ಮಂಡಿಸಿದ್ದರು.

ಪ್ರಕರಣವೇನು?
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರೂ ಆದ ನಿರ್ಮಾಪಕ ಆನಂದ ಅಪ್ಪುಗೋಳ್‌ ವಿರುದ್ಧ ಗ್ರಾಹಕರಿಂದ ಠೇವಣಿಯಾಗಿ ಪಡೆದ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪವಿದ್ದು, ಅಕ್ರಮ ಹಣ ವರ್ಗಾವಣೆ ನಿಯಂತ್ರಣ (ಪಿಎಂಎಲ್) ಕಾಯ್ದೆ ಅಡಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಆನಂದ್ ಅಪ್ಪುಗೋಳ್ ಅವರನ್ನು 2022ರ‌ ಜನವರಿ 5ರಂದು ಬಂಧಿಸಿದ್ದರು.

ಪ್ರಕರಣದಲ್ಲಿ ಜಾಮೀನು ಕೋರಿ ಆನಂದ್ ಅಪ್ಪುಗೋಳ್ ಸಲ್ಲಿಸಿದ್ದ ಅರ್ಜಿಯನ್ನು 2023ರ ಸೆಪ್ಟೆಂಬರ್ 27ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಇದರಿಂದ, ಜಾಮೀನು ಕೋರಿ ಆನಂದ್ ಸುಪ್ರೀಂಕೋರ್ಟ್‌‌ ಮೆಟ್ಟಿಲೇರಿದ್ದರು.

Related Articles

Comments (0)

Leave a Comment