ಕೋಲ್ಕತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ; ಪ.ಬಂಗಾಳ ಸರ್ಕಾರಕ್ಕೆ ಸುಪ್ರೀಂ ತಪರಾಕಿ

ವೈದ್ಯರು ಹಾಗೂ ಮಹಿಳಾ ವೈದ್ಯರ ಸುರಕ್ಷತೆ ಎನ್ನುವುದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ದೇಶ ಮತ್ತೊಂದು ಅತ್ಯಾಚಾರಕ್ಕೆ ಕಾಯುವಂತಾಗಬಾರದು.
– ಸುಪ್ರೀಂಕೋರ್ಟ್

ನವದೆಹಲಿ: ಕೊಲ್ಕತಾದ ಶ್ಯಾಮ್ ಬಜಾರ್‌ನ ಖುದಿರಾಂ ಬೋಸ್ ಸರಣಿಯಲ್ಲಿರುವ ರಾಧಾ ಗೋವಿಂದ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ 31 ವರ್ಷದ ಕರ್ತವ್ಯನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಹರಿಹಾಯ್ದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ಕೋಲ್ಕತಾ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದ ಈ ಪ್ರಕರಣವನ್ನು ನಾವು ಸ್ವಯಂಪ್ರೇರಿತವಾಗಿ ಪರಿಗಣಿಸಲು ಕಾರಣವಿದೆ. ಇದು ಕೇವಲ ಕೋಲ್ಕತಾ ಆಸ್ಪತ್ರೆಯಲ್ಲಿ ನಡೆದಿರುವ ಭೀಕರ ಕೊಲೆಯಲ್ಲ. ಬದಲಿಗೆ ದೇಶದಾದ್ಯಂತ ವೈದ್ಯರ ರಕ್ಷಣೆಗೆ ಸಂಬಂಧಿಸಿದ ವ್ಯವಸ್ಥೆಯ ಸಮಸ್ಯೆಯಾಗಿದೆ. ದೇಶದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಮಹಿಳಾ ವೈದ್ಯರು ರಕ್ಷಣೆ ವಿಚಾರದಲ್ಲಿರುವ ಕೊರತೆಗಳು ನಮ್ಮನ್ನು ತೀವ್ರವಾಗಿ ಚಿಂತೆಗೀಡು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿತು.

ಸಾರ್ವಜನಿಕರ ಪ್ರಾಣರಕ್ಷಣೆ ಮಾಡುವ ವೈದ್ಯರಿಗೆ ಈ ಸ್ಥಿತಿ ಎದುರಾಗಿರುವುದು ನಮ್ಮನ್ನು ನಿಜಕ್ಕೂ ಆಘಾತಕ್ಕೀಡು ಮಾಡಿದೆ. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿಗೆ ರಕ್ಷಣೆ ನೀಡುವ ಕುರಿತು ದೇಶಾದ್ಯಂತ ಏಕರೂಪ ಕಾನೂನು ರೂಪಿಸಲು ಕಾಲ ಸನ್ನಿಹಿತವಾಗಿದೆ. ಅದಕ್ಕಾಗಿ ನಮ್ಮ ದೇಶ ಮತ್ತೊಂದು ಅತ್ಯಾಚಾರ ಹಾಗೂ ಕೊಲೆ‌ ಪ್ರಕರಣಕ್ಕೆ ಸಾಕ್ಷಿ ಆಗುವವರೆಗೂ ಕಾಯುವಂತಾಗಬಾರದು ಎಂದು ನ್ಯಾಯಾಲಯ ಆಕ್ರೋಶ ಹೊರಹಾಕಿದೆ.

ಜತೆಗೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರ ವಿರುದ್ಧ ಪಶ್ಚಿಮ ಬಂಗಾಳದ ಸರ್ಕಾರ ತನ್ನ ಅಧಿಕಾರದ ಅಸ್ರ್ತ ಬಳಸದಂತೆಯೂ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಸಂತ್ರಸ್ತೆ ಗುರುತು ಬಹಿರಂಗ ಕಳವಳಕಾರಿ ಬೆಳವಣಿಗೆ:
ಇಂತಹ ಪ್ರಕರಣಗಳಲ್ಲಿ ಶಿಷ್ಟಾಚಾರ ಎನ್ನುವುದು ಕೇವಲ ಕಾಗದದ ಮೇಲಷ್ಟೇ ಇರದೇ, ರಾಷ್ಟ್ರದಾದ್ಯಂತ ಅದು ಜಾರಿಯಾಗಬೇಕು. ಕೋಲ್ಕತಾ ಪ್ರಕರಣದಲ್ಲಿ ಸಂತ್ರಸ್ತೆಯ ಹೆಸರು, ಫೋಟೋ ಹಾಗೂ ವಿಡಿಯೋಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವುದು ಆತಂಕದ ವಿಚಾರವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರ ಗುರುತು ಬಹಿರಂಗಪಡಿಸಬಾರದೆಂದು ಅನೇಕ ನ್ಯಾಯಾಲಯಗಳು ತೀರ್ಪು ನೀಡಿದ್ದರೂ, ಸಂತ್ರಸ್ತೆಯ ಹೆಸರು, ಫೋಟೋಗಳು ಹರಿದಾಡಿವೆ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳ ಸಂತ್ರಸ್ತರಿಗೆ ನಾವು ತೋರುವ ಘನತೆ ಇದೇ ಏನು ಎಂದು ವಿಚಾರಣೆ ವೇಳೆ ನ್ಯಾಯಪೀಠ ಪ್ರಶ್ನಿಸಿತು.

ಪ್ರಸ್ತುತ ಪಶ್ಚಿಮ ಬಂಗಾಳದ ಡಿಐಜಿ ವಿರುದ್ಧ ಸಾಕ್ಷಿ ನಾಶ ಪಡಿಸುವುದು, ತನಿಖೆ ದಿಕ್ಕು ತಪ್ಪಿಸುದರಲ್ಲಿ ನಿಪುಣರಾಗಿದ್ದು, ಸಾರದಾ ಪ್ರಕರಣದಲ್ಲಿ ಇವರ ವಿರುದ್ಧ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲೂ ಇವರೇ ನೇತೃತ್ವ ವಹಿಸಿದರೆ ನೊಂದವರಿಗೆ ನ್ಯಾಯ ಸಿಗುವುದು ಮರೀಚಿಕೆ ಆಗುವುದರಲ್ಲಿ ಅನುಮಾನವಿಲ್ಲ. ಆದ ಕಾರಣ ಈ ಪ್ರಕರಣದ ತನಿಖೆಯಿಂದ ಇವರನ್ನ ಕೈ ಬಿಡಬೇಕೆಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್‌ನಲ್ಲಿ ಪ್ರಬಲವಾಗಿ ವಾದ ಮಂಡಿಸಿದರು.

ಕಾರ್ಯಪಡೆ ರಚನೆ:
ಆರೋಗ್ಯ ಸಿಬ್ಬಂದಿ ರಕ್ಷಣೆ ಕುರಿತಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ತಮ್ಮದೇ ಆದ ಕಾನೂನು ರೂಪಿಸಿಕೊಂಡಿವೆಯಾದರೂ ರಾಷ್ಟ್ರಮಟ್ಟದಲ್ಲಿ ಏಕರೂಪದ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಸುಪ್ರೀಂಕೋರ್ಟ್, ಅದರಂತೆ ಆರೋಗ್ಯ ಕ್ಷೇತ್ರದ ಸಿಬ್ಬಂದಿ ರಕ್ಷಣೆ ನಿಟ್ಟಿನಲ್ಲಿ ಸೂಕ್ತ ಕ್ರಿಯಾ ಯೋಜನೆ ರೂಪಿಸಲು ನುರಿತ ತಜ್ಞರನ್ನೊಳಗೊಂಡ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ರಚನೆ ಮಾಡಿ ಆದೇಶಿಸಿದೆ. ಈ ಕಾರ್ಯಪಡೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಅವರೂ ಒಬ್ಬರಾಗಿದ್ದಾರೆ.

Related Articles

Comments (0)

Leave a Comment