ವೈದ್ಯರ ಸುರಕ್ಷತೆಗೆ ಕ್ರಮ; ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್

ನವದೆಹಲಿ: ದೇಶದಾದ್ಯಂತ ವೈದ್ಯರ ಸುರಕ್ಷತೆ ಹಾಗೂ ಹಿತರಕ್ಷಣೆಯತ್ತ ಗಮನ ಹರಿಸಲು ಹಾಗೂ ಕೆಲಸದ ಸ್ಥಳದಲ್ಲಿ ವೈದ್ಯರು ಮತ್ತಿತರ ವೈದ್ಯಕೀಯ ವೃತ್ತಿಪರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಕಾರ್ಯಪಡೆಯೊಂದನ್ನು (ಎನ್‌ಟಿಎಫ್‌) ರಚನೆ ಮಾಡಿ ಸುಪ್ರೀಂಕೋರ್ಟ್ ಆದೇಶಿಸಿದೆ.

ಕೋಲ್ಕತಾದಲ್ಲಿ 31 ವರ್ಷದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ಮಾಡಿದೆ.

ಯುವ ವೈದ್ಯರನ್ನು ಹೆಚ್ಚಿನ ಅವಧಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಪುರುಷ ಹಾಗೂ ಮಹಿಳಾ ವೈದ್ಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಪಡೆಯಲು ಹಾಗೂ ಕೆಲಸ ಮಾಡಲು ಕೊಠಡಿಗಳಿಲ್ಲ. ಕೆಲಸದ ಸ್ಥಳದಲ್ಲಿ ಸುರುಕ್ಷಿತ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಷ್ಟಾಚಾರವೊಂದನ್ನು ರೂಪಿಸುವ ಅಗತ್ಯವಿದೆ. ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ರಕ್ಷಣೆ ಇಲ್ಲವೆಂದಾದರೆ, ಸಂವಿಧಾನದಲ್ಲಿ ಹೇಳಲಾಗಿರುವ ಸಮಾನತೆಗೆ ಅರ್ಥವೇ ಇರುವುದಿಲ್ಲ ಎಂದು ನ್ಯಾಯಪೀಠ ಬೇಸರದಿಂದ ನುಡಿಯಿತು.

ವೈದ್ಯರ ಸುರಕ್ಷತೆ ಹಾಗೂ ಹಿತರಕ್ಷಣೆಗೆ ಗಮನ ಹರಿಸಲು ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್, ಸರ್ಜನ್ ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಾ. ಡಿ. ನಾಗೇಶ್ವರ ರೆಡ್ಡಿ, ಡಾ. ಎಂ. ಶ್ರೀನಿವಾಸ್, ಬೆಂಗಳೂರಿನ‌ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಡಾ. ಗೋವರ್ಧನ್ ದತ್ ಪುರಿ, ಡಾ. ಸೌಮಿತ್ರ ರಾವತ್, ದೆಹಲಿಯ ಏಮ್ಸ್ ನ ಹೃದ್ರೋಗ ವಿಭಾಗದ ಮುಖ್ಯಸ್ಥೆ ಪ್ರೊ. ಅನಿತಾ ಸಕ್ಸೇನಾ, ಮುಂಬೈ ವೈದ್ಯಕೀಯ ಕಾಲೇಜಿನ ಪ್ರೊ. ಪಲ್ಲವಿ ಸಪ್ರೆ, ಏಮ್ಸ್ ನ ನರರೋಗ ತಜ್ಞೆ ಡಾ. ಪದ್ಮಾ ಶ್ರೀವಾಸ್ತವ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು, ರಾಷ್ಟ್ರೀಯ ಪರೀಕ್ಷಾಮಂಡಳಿಯ ಅಧ್ಯಕ್ಷರನ್ನು ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿ ನೇಮಿಸಿದೆ.

ಎನ್‌ಟಿಎಫ್ ಕಾರ್ಯವ್ಯಾಪ್ತಿ:
ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ, ಹಿತರಕ್ಷಣೆಯಂತಹ ವಿಚಾರಗಳನ್ನು ಪರಿಶೀಲಿಸಿ ಅಗತ್ಯ ಶಿಫಾರಸು ಮಾಡಬೇಕು ಎಂದಿರುವ ನ್ಯಾಯಾಲಯ, ಕಾರ್ಯಪಡೆ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳನ್ನು ಪಟ್ಟಿ ಮಾಡಿದೆ.

* ಹೆಚ್ಚುವರಿ ಭದ್ರತೆ ಅಗತ್ಯವಿರುವ ತುರ್ತು ಕೊಠಡಿ ಪ್ರದೇಶ‌.
* ಶಸ್ತ್ರಾಸ್ತ್ರಗಳನ್ನು ತಡೆಯಲು ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆಯ ಅಗತ್ಯತೆ.
* ರೋಗಿಗಳಲ್ಲದ ವ್ಯಕ್ತಿಗಳನ್ನು ನಿಗದಿತ ಮಿತಿಯಿಂದ ದೂರ ಉಳಿಸುವುದು.
* ಜನಸಂದಣಿ ನಿಯಂತ್ರಣಕ್ಕೆ ಭದ್ರತಾ ವ್ಯವಸ್ಥೆ.
* ವೈದ್ಯರ ಹಾಗೂ ಶುಶ್ರೂಷಕರ ವಿಶ್ರಾಂತಿ ಕೊಠಡಿ.
* ಆಸ್ಪತ್ರೆಯ ಎಲ್ಲ ಜಾಗದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಹಾಗೂ ಸಿಟಿವಿ ಅಳವಡಿಕೆ.
* ವೈದ್ಯರಿಗೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು.
* ಸಾಂಸ್ಥಿಕ ಸುರಕ್ಷತಾ ಕ್ರಮಗಳ ಕುರಿತು ಪ್ರತಿ‌‌ 3 ತಿಂಗಳಿಗೊಮ್ಮೆ ಪರಿಶೀಲನೆ‌ ನಡೆಸುವುದು.
* ವೈದ್ಯರಿಗೆ ಸಹಾಯವಾಣಿ ಸ್ಥಾಪನೆ.
ಈ ನಿಟ್ಟಿನಲ್ಲಿ‌ ಕೈಗೊಂಡ ಕ್ರಮಗಳ ಬಗ್ಗೆ 3 ವಾರದಲ್ಲಿ ಮಧ್ಯಂತರ ವರದಿ ಹಾಗೂ 2 ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸಬೇಕು ಎಂದು ಕಾರ್ಯಪಡೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಕೇಂದ್ರ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿ ಕೇಳಿದ ಸುಪ್ರೀಂಕೋರ್ಟ್:
* ಪ್ರತಿ ಆಸ್ಪತ್ರೆಯಲ್ಲಿ ಎಷ್ಟು ಮಂದಿ ಭದ್ರತಾ ಸಿಬ್ಬಂದಿ ಇದ್ದಾರೆ?
* ಪ್ರವೇಶ ದ್ವಾರದಲ್ಲಿ ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆಯೇ?
* ಎಷ್ಟು ವಿಶ್ರಾಂತಿ ಕೊಠಡಿಗಳಿವೆ ಹಾಗೂ ಅಲ್ಲಿ ಯಾವೆಲ್ಲ ಸೌಲಭ್ಯ ಕಲ್ಪಿಸಲಾಗಿದೆ?
* ಆಸ್ಪತ್ರೆಯ ಎಲ್ಲ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಲಾಗಿದೆಯೇ?
* ಆಸ್ಪತ್ರೆ ಹೊರಭಾಗದಲ್ಲಿ ಪೊಲೀಸ್ ಔಟ್ ಪೋಸ್ಟ್ ಗಳಿವೆಯೇ?
* ಉದ್ಯೋಗ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಆಂತರಿಕ ದೂರು ಸಮಿತಿ ರಚಿಸಲಾಗಿದೆಯೇ?
ಎಂಬ ಅಂಶಗಳನ್ನೊಳಗೊಂಡ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಅಂತಿಮವಾಗಿ, ಕೋಲ್ಕತಾ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಆ.22ರ ಒಳಗೆ ಸಲ್ಲಿಸಬೇಕು ಎಂದು ಸಿಬಿಐಗೆ ನಿರ್ದೇಶಿಸಿದ ಪೀಠ, ಕೃತ್ಯ ನಡೆದ ಬಳಿಕ ಸಾರ್ವಜನಿಕರು ಆಸ್ಪತ್ರೆಗೆ ನುಗ್ಗಿ ‌ದಾಂಧಲೆ‌ ನಡೆಸಿರುವುದಕ್ಕೆ ಸಂಬಂಧಿಸಿದ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ನಿರ್ದೇಶಿಸಿ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Related Articles

Comments (0)

Leave a Comment