- ಸುಪ್ರೀಂಕೋರ್ಟ್
- Like this post: 1
ರೈತರಿಗೆ ಪ್ರತಿಭಟಿಸುವ ಹಕ್ಕಿದೆ; ಸುಪ್ರೀಂಕೋರ್ಟ್
- by LegalSamachar
- August 10, 2024
- 69 Views
ನವದೆಹಲಿ: ಪ್ರತಿಭಟನಾನಿರತ ರೈತರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವ ಹಕ್ಕಿದ್ದು, ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ರೈತರ ಬೇಡಿಕೆಯ ನಿರ್ಣಯ ರೂಪಿಸಲು ತಟಸ್ಥ ವ್ಯಕ್ತಿಗಳನ್ನು ನಿಯೋಜಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪಂಜಾಬ್ ಮತ್ತು ಹರಿಯಾಣಕ್ಕೆ ಸಂಪರ್ಕ ಸೇತುವೆಯಾಗಿರುವ ಶಂಭೂ ಗಡಿಯನ್ನು ಮುಕ್ತಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಾಡಿದ್ದ ಆದೇಶ ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ, ರೈತರು ಟ್ರ್ಯಾಕ್ಟರ್ ಮತ್ತು ಜೆಸಿಬಿಗಳ ಜೊತೆ ಬರದಂತೆ ಸರ್ಕಾರ ಮನವೊಲಿಸಬೇಕು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿಭಟನಾನಿರತ ರೈತರು ಅಷ್ಟು ಸುಲಭವಾಗಿ ರಾಜಧಾನಿಗೆ ಪ್ರವೇಶಿಸಲು ಅನುಮತಿಸಲಾಗದು ಎಂದರು.
ಆಗ ನ್ಯಾಯಪೀಠ, ಸಮಿತಿಯ ಮೂಲಕ ಪ್ರತಿಭಟನಾನಿರತ ರೈತರೊಂದಿಗೆ ಚರ್ಚಿಸುವಂತೆ ನೀಡಿದ್ದ ಸಲಹೆಯನ್ನು ಪುನರುಚ್ಛರಿಸಿತಲ್ಲದೆ, ರೈತರ ಜತೆ ಚರ್ಚಿಸಿ ಸಮಿತಿ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಬೇಕು. ಹಲವು ಅತ್ಯುತ್ತಮ ವ್ಯಕ್ತಿಗಳಿದ್ದಾರೆ. ರಾಜಕಾರಣಿಗಳನ್ನು ಕಳುಹಿಸುವ ಬದಲು ತಟಸ್ಥ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಎರಡೂ ಸರ್ಕಾರಗಳು ಹೆಸರುಗಳನ್ನು ಅಂತಿಮಗೊಳಿಸುವುದು ರೈತರಲ್ಲಿ ಭರವಸೆ ಉಂಟು ಮಾಡಬಹುದು. ನ್ಯಾಯಮೂರ್ತಿಗಳು ತಜ್ಞರಲ್ಲ. ಆದರೆ, ಕೃಷಿ ಹಿನ್ನೆಲೆ ಹೊಂದಿರುವ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಬಹುದು. ಪ್ರಮುಖ ವಿಶ್ವವಿದ್ಯಾಲಯಗಳ ಉಪನ್ಯಾಸಕರು, ಸಂಶೋಧಕರನ್ನು ಆಯ್ಕೆ ಮಾಡಿ, ಸಮಸ್ಯೆ ಪರಿಹರಿಸಬೇಕು ಎಂದಿತು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮತ್ತೊಮ್ಮೆ ದೆಹಲಿಗೆ ಪ್ರತಿಭಟನೆ ಕೈಗೊಳ್ಳಲು ಮುಂದಾಗಿರುವ ರೈತರ ಜತೆ ಮಾತುಕತೆ ನಡೆಸುವಂತೆ ಕಳೆದ ತಿಂಗಳು ಸರ್ಕಾರಕ್ಕೆ ನ್ಯಾಯಾಲಯ ಹೇಳಿತ್ತು. ಈ ಸಂಬಂಧ ಸಮಿತಿ ರಚಿಸಲು ಸೂಚನೆ ಪಡೆಯುವಂತೆ ಸಾಲಿಸಿಟರ್ ಜನರಲ್‌ಗೆ ಸೂಚಿಸಿದ ಪೀಠ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಸಮಿತಿಯಲ್ಲಿ ಯಾರೆಲ್ಲ ಸದಸ್ಯರಾಗಬೇಕು ಎಂಬುದನ್ನು ತಿಳಿಸಬಹುದು ಎಂದು ಹೇಳಿತು. ಸಮಿತಿ ರಚನೆಗೆ ತುಷಾರ್ ಮೆಹ್ತಾ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಲಾಗಿದೆ.
Related Articles
Thank you for your comment. It is awaiting moderation.
Comments (0)