- ಸುಪ್ರೀಂಕೋರ್ಟ್
- Like this post: 2
ಮೌಢ್ಯ ನಿರ್ಮೂಲನೆಗೆ ನಿರ್ದೇಶನ ನೀಡಲಾಗದು; ಸುಪ್ರೀಂಕೋರ್ಟ್
- by LegalSamachar
- August 10, 2024
- 55 Views
ನವದೆಹಲಿ: ದೇಶದಲ್ಲಿ ಮೌಢ್ಯಾಚರಣೆ ತೊಡೆದು ಹಾಕುವಂತೆ ಹಾಗೂ ಭಾರತೀಯರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ನಿರ್ದೇಶಿಸಬೇಕೆಂಬ ಮನವಿಯದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮೂಢನಂಬಿಕೆ ಮತ್ತು ವಾಮಾಚಾರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಸಂವಿಧಾನದ ಪರಿಚ್ಛೇದ 51ಎ ನಲ್ಲಿ ತಿಳಿಸಿರುವಂತೆ ವೈಜ್ಞಾನಿಕ ಮನೋಭಾವ, ಮಾನವತಾವಾದ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಲು ಸೂಚಿಸಬೇಕು ಎಂದು ಕೋರಿ ಬಿಜೆಪಿ ನಾಯಕ ಹಾಗೂ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ನ್ಯಾಯಾಲಯ ನಾಗರಿಕರಿಗೆ ನಿರ್ದೇಶನ ನೀಡಲಾಗದು ಎಂದು ಸ್ಪಷ್ಟಪಡಿಸಿತು.
ಈ ವಿಚಾರದಲ್ಲಿ ಸಂಸತ್ತು ಮಧ್ಯಪ್ರವೇಶಿಸಿ, ವೈಜ್ಞಾನಿಕ ಮನೋಭಾವ ಬೆಳೆಸುವಂತೆ ಮಾಡಲು ಕಾನೂನು ರೂಪಿಸಬಹುದು. ಆದರೆ, ನ್ಯಾಯಾಲಯ ಈ ಕುರಿತು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ. ಪ್ರಭುತ್ವದ ನೀತಿ ನಿರ್ದೇಶಕ ತತ್ವಗಳು ವೈಜ್ಞಾನಿಕ ಮನೋಭಾವದ ಅಭಿವೃದ್ಧಿಗೆ ಒತ್ತು ನೀಡುತ್ತವೆಯಾದರೂ, ಅದನ್ನು ನ್ಯಾಯಾಂಗ ನಿರ್ದೇಶಿಸಲಾಗದು ಎಂದು ಪೀಠ ತಿಳಿಸಿತು. ಈ ಹಿನ್ನೆಲೆಯಲ್ಲಿ ಉಪಾಧ್ಯಾಯ ಅವರು ತಮ್ಮ ಅರ್ಜಿ ಹಿಂಪಡೆದುಕೊಂಡರು.
ಅರ್ಜಿದಾರರ ಮನವಿ ಏನಿತ್ತು?
ಕಟ್ಟುನಿಟ್ಟಾದ ಮೌಢ್ಯ ಮತ್ತು ವಾಮಾಚಾರ ವಿರೋಧಿ ಕಾನೂನು ಜಾರಿಗೆ ತರಬೇಕು. ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಮಾಜದಲ್ಲಿ ಪ್ರಚಲಿತದಲ್ಲಿರುವ ಅವೈಜ್ಞಾನಿಕ ಆಚರಣೆಗಳನ್ನು ತೊಡೆದುಹಾಕಬೇಕು. ಸಮಾಜದ ಎಲ್ಲರನ್ನೂ ಅದರಲ್ಲಿಯೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳನ್ನು ಅತಾರ್ಕಿಕ ನಂಬಿಕೆಯ ಆಧಾರದಲ್ಲಿ ನೋಡಬಾರದು. ಮುಗ್ಧ ಜನರ ಶೋಷಣೆ ತಡೆಯಬೇಕು. ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವೈಚಾರಿಕ ಮನೋಭಾವ ಬೆಳೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Related Articles
Thank you for your comment. It is awaiting moderation.
Comments (0)