ಯೋಗೀಶ ಗೌಡರ್ ಕೊಲೆ ಪ್ರಕರಣ: ಆರೋಪಿ ಅಶ್ವತ್ಥ್ ಜಾಮೀನು ರದ್ದುಪಡಿಸಿದ ಹೈಕೋರ್ಟ್
- by Prashanth Basavapatna
- August 18, 2025
- 167 Views

ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ ಗೌಡರ್ ಕೊಲೆ ಪ್ರಕರಣದ 9ನೇ ಆರೋಪಿ ಅಶ್ವತ್ಥ್ಗೆ ಮಂಜೂರು ಮಾಡಿದ್ದ ಜಾಮೀನನ್ನು ಹೈಕೋರ್ಟ್ ತಾತ್ಕಾಲಿಕವಾಗಿ ರದ್ದುಪಡಿಸಿದೆ.
ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪುರಸ್ಕರಿಸಿದೆ.
ಪ್ರಾಸಿಕ್ಯೂಷನ್ ಸಾಕ್ಷಿಗಳಾದ 10, 30, 40ರ ವಿಚಾರಣೆ ಮುಗಿಯುವವರೆಗೆ ಜೈಲಿನಲ್ಲಿರಬೇಕು. ಉಲ್ಲೇಖಿತ ಸಾಕ್ಷಿಗಳ ವಿಚಾರಣೆ ಮುಗಿದ ಬಳಿಕ ಅಶ್ವತ್ಥ್ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.
ಸಿಬಿಐ ಪರ ವಕೀಲ ಪಿ. ಪ್ರಸನ್ನಕುಮಾರ್ ಅವರು, ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಬಸವರಾಜ ಮುತ್ತಗಿಗೆ ಅಶ್ವತ್ಥ್ ಜೀವ ಬೆದರಿಕೆ ಹಾಕಿದ್ದಾನೆ, ಮತ್ತೊಬ್ಬ ಸಾಕ್ಷಿಗೂ ಕೋರ್ಟ್ ಆವರಣದಲ್ಲೇ ಬೆದರಿಕೆಯೊಡ್ಡಿದ್ದಾನೆ. ಸಿವಿಲ್ ನ್ಯಾಯಾಲಯದ ಸಿಸಿಟಿವಿಯಲ್ಲಿ ಅಶ್ವತ್ಥ್ ಬೆದರಿಕೆ ಹಾಕಿರುವ ದೃಶ್ಯ ಸೆರೆಯಾಗಿದೆ ಎಂದು ಕಳೆದ ವಿಚಾರಣೆ ವೇಳೆ ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ:
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣ ವಿಚಾರಣಾ ಹಂತದಲ್ಲಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು.
Related Articles
Thank you for your comment. It is awaiting moderation.
Comments (0)