ಶಾಸಕ ವಿನಯ ಕುಲಕರ್ಣಿ ಜಾಮೀನು ಅರ್ಜಿ; ಸಿಬಿಐಗೆ ಹೈಕೋರ್ಟ್ ನೋಟಿಸ್
- by Ramya B T
- December 11, 2025
- 18 Views
ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿ ಸಿಬಿಐಗೆ ನೋಟಿಸ್ ಜಾರಿಗೊಳಿಸತಲ್ಲದೆ, ಮುಂದಿನ ಗುರುವಾರದೊಳಗೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪ್ರಕರಣದ ವಿಚಾರಣೆಯು ಡಿಸೆಂಬರ್ 22ರಂದು ಮುಕ್ತಾಯವಾಗಲಿದೆ. ಒಟ್ಟಾರೆ 21 ಆರೋಪಿಗಳಿದ್ದು, 20 ಮಂದಿಗೆ ಜಾಮೀನು ದೊರೆತಿದೆ. ನೈಜ ಆರೋಪಿಗಳಾದ 8ರಿಂದ 13ನೇ ಆರೋಪಿಗಳಿಗೆ ಜಾಮೀನು ದೊರೆತಿದ್ದು, ಪ್ರಾಸಿಕ್ಯೂಷನ್ ಪ್ರಕಾರ ವಿನಯ್ ಕುಲಕರ್ಣಿ ಪಿತೂರಿದಾರರಷ್ಟೆ. ಅಮುಖ್ಯವಾದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕುಲಕರ್ಣಿಗೆ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದೇ ತಿಂಗಳ 20ಕ್ಕೆ ಕೊನೇ ಸಾಕ್ಷಿ ವಿಚಾರಣೆಗೆ ನಿಗದಿಯಾಗಿದ್ದು, ಅದನ್ನು ಬಿಟ್ಟು ಬೇರಾವುದೇ ಸಾಕ್ಷಿ ವಿಚಾರಣೆ ಬಾಕಿ ಇಲ್ಲ. ಡಿಸೆಂಬರ್ 22ಕ್ಕೆ ತನಿಖಾಧಿಕಾರಿಯ ವಿಚಾರಣೆ ನಿಗದಿಯಾಗಿದೆ. ವಿಚಾರಣಾ ನ್ಯಾಯಾಲಯವು 9 ಮತ್ತು 19ನೇ ಆರೋಪಿಗಳಿಗೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಜಾಮೀನು ರದ್ದುಪಡಿಸಿತ್ತು. ಆದರೆ, ಹೈಕೋರ್ಟ್ ಅದನ್ನು ರದ್ದುಪಡಿಸಿತ್ತು ಎಂದು ತಿಳಿಸಿದರಲ್ಲದೆ, ವಿನಯ ಕುಲಕರ್ಣಿ ವಿರುದ್ಧ ಒಂದೇ ಒಂದು ಸಾಕ್ಷಿ ಬಾಕಿ ಇದ್ದು, ಅವರ ಹೇಳಿಕೆ ದಾಖಲಾದ ಬಳಿಕ ಜಾಮೀನು ಮಂಜೂರು ಮಾಡಬೇಕು ಎಂದರು.
ಸಿಬಿಐ ಪರ ವಕೀಲ ರಾಹುಲ್ ರೆಡ್ಡಿ ವಾದ ಮಂಡಿಸಿ, ವಿನಯ ಕುಲಕರ್ಣಿ ವಿರುದ್ಧ ಒಂದೇ ಒಂದು ಸಾಕ್ಷಿ ದಾಖಲು ಬಾಕಿ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅವರ ನಡತೆ ಗಮನಿಸಿ ಜಾಮೀನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Related Articles
Thank you for your comment. It is awaiting moderation.


Comments (0)