ಯೋಗೀಶ ಗೌಡರ್ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
- by Jagan Ramesh
- December 18, 2025
- 13 Views
ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಶಾಸಕ ವಿನಯ ಕುಲಕರ್ಣಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪ್ರಕರಣ ಸಂಬಂಧ ಕೇವಲ ಒಬ್ಬ ಸಾಕ್ಷಿ ವಿಚಾರಣೆ ಬಾಕಿಯಿದೆ. ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಈಗಾಗಲೇ 20 ಮಂದಿಗೆ ಜಾಮೀನು ದೊರೆತಿದೆ. ಕುಲಕರ್ಣಿ ಅವರಿಗೆ ಮಾತ್ರ ಜಾಮೀನು ದೊರೆತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಆಕ್ಷೇಪಿಸಿದ ಸಿಬಿಐ ಪರ ವಿಶೇಷ ಅಭೀಯೋಜಕ ಪಿ. ಪ್ರಸನ್ನ ಕುಮಾರ್ ಅವರು, ಸಾಕ್ಷಿ ಮೇಲೆ ಒತ್ತಡ ಹೇರುವ ಮೂಲಕ ಜಾಮೀನು ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಈ ಹಿಂದೆ ನೀಡಿದ್ದ ಜಾಮೀನು ರದ್ದುಪಡಿಸಿ, ತಕ್ಷಣ ಶರಣಾಗುವಂತೆ ಆದೇಶಿಸಿತ್ತು. ಜತೆಗೆ, ಪ್ರಕರಣದ ವಿಚಾರಣೆ (Trial) ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಜಾಮೀನು ಕೋರುವ ಯಾವುದೇ ಸ್ವಾತಂತ್ರ್ಯವನ್ನು ವಿನಯ ಕುಲಕರ್ಣಿಗೆ ಸುಪ್ರೀಂಕೋರ್ಟ್ ಉಳಿಸಿಲ್ಲ. ಇದೇ ಕಾರಣಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಜಾಮೀನು ನಿರಾಕರಿಸಿದೆ. ದಿನನಿತ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಜಾಮೀನು ನೀಡುವ ಅಗತ್ಯವಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ನ್ಯಾಯಪೀಠ, ಅರ್ಜಿದಾರರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇದರಿಂದ, ಹಾಲಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸಬಹುದೇ? ಎಂಬ ಬಗ್ಗೆ ಸ್ಪಷ್ಟನೆ ಬೇಕಿದೆ. ಈ ಕುರಿತು ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದರೆ ಮೆರಿಟ್ ಮೇಲೆ ಅರ್ಜಿ ವಿಚಾರಣೆ ನಡೆಸಿ ತೀರ್ಮಾನಿಸಬಹುದು. ಇಲ್ಲವಾದರೆ ಅರ್ಜಿದಾರರು ನೇರವಾಗಿ ಸುಪ್ರೀಂಕೋರ್ಟ್‌ನಲ್ಲೇ ಜಾಮೀನು ಕೋರಬಹುದು ಎಂದು ಹೇಳಿತು. ವಿನಯ ಕುಲಕರ್ಣಿ ಪರ ವಕೀಲರು ವಾದ ಮುಂದುವರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)