ಪ್ರಚೋದನಕಾರಿ ಹೇಳಿಕೆ ಆರೋಪ; ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಯತ್ನಾಳ್

ಬೆಂಗಳೂರು: ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ. ನೀಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಕೊಪ್ಪಳ ಟೌನ್‌ ಪೊಲೀಸ್‌ ಠಾಣೆಯಲ್ಲಿ ದಾಖಾಗಿರುವ ಎಫ್‌ಐಆರ್‌ ರದ್ದು ಕೋರಿ ವಿಜಯಪುರದ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಎಫ್‌ಐಆರ್ ರದ್ದು ಕೋರಿ ಯತ್ನಾಳ್‌ ಸಲ್ಲಿಸಿರುವ ಅರ್ಜಿಯಲ್ಲಿ ಕೊಪ್ಪಳ ಟೌನ್‌ ಠಾಣೆ ಪೊಲೀಸರು ಮತ್ತು ದೂರುದಾರರಾದ ಉಮರ್‌ ಜುನೈದ್‌ ಖುರೇಷಿ, ಮೈನುದ್ದೀನ್‌ ಬೀಳಗಿ ಮತ್ತು ಅಬ್ದುಲ್‌ ಕಲಾಂ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ಪ್ರಕರಣವೇನು?
ಕೊಪ್ಪಳ ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿ ಗವಿಸಿದ್ದಪ್ಪ ಎನ್ನುವ ಯುವಕ ಅನ್ಯ ಕೋಮಿನ ಯುವಕರಿಂದ ಆಗಸ್ಟ್ 3ರಂದು ಕೊಲೆಯಾಗಿದ್ದರು ಎಂದು ಆರೋಪಿಸಲಾಗಿದ್ದು, ಕೊಲೆಯಾದ ಯುವಕನ ಕುಟುಂಬದವರಿಗೆ ಸ್ವಾಂತನ ಹೇಳಲು ಆಗಸ್ಟ್ 10ರಂದು ಶಾಸಕ ಯತ್ನಾಳ್ ಕೊಪ್ಪಳಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುತ್ತೇನೆ. ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ‌. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹರಡುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಕಲಾಂ ಮತ್ತಿತರರು ದೂರು ನೀಡಿದ್ದರು. ದೂರು ಆಧರಿಸಿ ಕೊಪ್ಪಳ ಟೌನ್‌ ಠಾಣೆ ಪೊಲೀಸರು ಯತ್ನಾಳ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

Related Articles

Comments (0)

Leave a Comment