ಜಿಬಿಎ ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸಿದ ಮಾನದಂಡಗಳೇನು? ಸರ್ಕಾರದಿಂದ ಮಾಹಿತಿ ಕೇಳಿದ ಹೈಕೋರ್ಟ್
- by Jagan Ramesh
- January 6, 2026
- 413 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ವಾರ್ಡ್ಗಳ ಹೆಸರು ಬದಲಾವಣೆಗೆ ಅನುಸರಿಸಲಾಗಿರುವ ಪ್ರಕ್ರಿಯೆ ಮತ್ತು ಮಾನದಂಡಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಜಿಬಿಎ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ಹೆಸರನ್ನು ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಿರುವುದನ್ನು ಆಕ್ಷೇಪಿಸಿ ಎಚ್.ಸಿ. ಬಸವರಾಜಪ್ಪ ಸೇರಿ ಹೆಮ್ಮಿಗೆಪುರ ಹಾಗೂ ಸುತ್ತಲಿನ ಪ್ರದೇಶಗಳ 15 ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಾರ್ಡ್ ಮರುವಿಂಗಡಣೆ, ಮೀಸಲಾತಿ ನಿಗದಿ ಇವೆಲ್ಲವೂ ಕಾನೂನು ಪ್ರಕ್ರಿಯೆಗಳು ಎಂಬುದೇನೋ ಸರಿ. ಆದರೆ, ವಾರ್ಡ್ಗಳ ಹೆಸರು ಬದಲಿಸುವುದು ಏತಕ್ಕೆ? ಎಂದು ಪ್ರಶ್ನಿಸಿತಲ್ಲದೆ, ವಾರ್ಡ್ಗಳ ಹೆಸರು ಬದಲಾವಣಗೆ ಅನುಸರಿಸುವ ಮಾನದಂಡಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಿಬಿಎ ಅಸ್ತಿತ್ವಕ್ಕೆ ಬಂದು ವಾರ್ಡ್ಗಳ ಮರುವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ. ಬಿಬಿಎಂಪಿ ರಚನೆ ಆದಾಗಿಂದಲೂ ಹೆಮ್ಮಿಗೆಪುರ ವಾರ್ಡ್ ಅಸ್ತಿತ್ವದಲ್ಲಿದೆ. ಜಿಬಿಎ ರಚನೆ ಬಳಿಕ 2025ರ ಸೆಪ್ಟೆಂಬರ್ 30ರಂದು ಹೊರಡಿಸಲಾದ ಕರಡು ಅಧಿಸೂಚನೆಯಲ್ಲಿ ಹೆಮ್ಮಿಗೆಪುರ ವಾರ್ಡ್ ಎಂದೇ ಇತ್ತು. ಆಕ್ಷೇಪಣೆ ಆಲಿಸಿದ ಬಳಿಕ ನವೆಂಬರ್ 19ರಂದು ಅಂತಿಮ ಅಧಿಸೂಚನೆ ಹೊರಡಿಸಿ ಹೆಮ್ಮಿಗೆಪುರ ವಾರ್ಡ್ ಎಂದು ಹೆಸರು ಅಂತಿಮಗೊಳಿಸಲಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮುಂದುವರಿದು, ಡಿಸೆಂಬರ್ 1ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ ಯಾವುದೇ ಆಕ್ಷೇಪಣೆಗಳನ್ನೂ ಆಲಿಸದೆ ಹೆಸರನ್ನು ಹೆಮ್ಮಿಗೆಪುರ ವಾರ್ಡ್ನಿಂದ ಕೆಂಗೇರಿ ಕೋಟೆ ವಾರ್ಡ್ ಎಂದು ಬದಲಿಸಲಾಗಿದೆ. ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ರಾಜಕೀಯ ಕಾರಣಗಳಿಗೆ ಯಶವಂತಪುರ ಹಾಲಿ ಶಾಸಕ ಎಸ್. ಸೋಮಶೇಖರ್ ಅವರ ಸೂಚನೆಯಂತೆ ಹೆಸರು ಬದಲಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಟ ಭಾಗ ಮತ್ತು ಸಮುದಾಯದ ಮತಗಳನ್ನು ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಕ್ಷೇಪಿಸಿದರು.
ಸರ್ಕಾರದ ಪರ ವಕೀಲರು, ಹೆಸರು ಬದಲಿಸಲು ಜಿಬಿಎ ಕಾಯ್ದೆಯಲ್ಲಿ ಅವಕಾಶವಿದೆ. ಅದಾಗ್ಯೂ, ಈ ಕುರಿತು ಸರ್ಕಾರದಿಂದ ಹೆಚ್ಚಿನ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಹೇಳಿದರು.
Related Articles
Thank you for your comment. It is awaiting moderation.


Comments (0)