ಯುದ್ಧ ಪರಿಸ್ಥಿತಿಯಿಂದಾಗಿ ಇಂಗ್ಲೆಂಡ್‌ನಲ್ಲೇ ಉಳಿದಿರುವ ರಣವೀರ್ ಸಿಂಗ್; ಹೈಕೋರ್ಟ್‌ಗೆ ವಕೀಲರ ಮಾಹಿತಿ

ಬೆಂಗಳೂರು: ಇರಾನ್‌ ಹಾಗೂ ಇಸ್ರೇಲ್ ನಡುವೆ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದು, ಭಾರತಕ್ಕೆ ಹಿಂದಿರುಗಲಾಗುತ್ತಿಲ್ಲ ಎಂದು ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ಟ್‌ಗೆ ತಿಳಿಸಿದರು.

ಕಾಂತಾರ ಚಾಪ್ಟರ್‌-1 ಚಿತ್ರದ ದೈವಪಾತ್ರಗಳನ್ನು ಅಪಹಾಸ್ಯ ಮಾಡಿ, ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ತಂದ ಆರೋಪ ಸಂಬಂಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಹಾಗೂ ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಮೊದಲನೇ ಪ್ರತಿವಾದಿ ಹೈಗ್ರೌಂಡ್ಸ್‌ ಠಾಣೆ ಪೊಲೀಸರ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿ ಸಂಬಂಧ ಸರ್ಕಾರದ ಆಕ್ಷೇಪಣೆ ಸಿದ್ಧವಾಗಿದೆ. ಅದನ್ನು ಮುಂದಿನ ಎರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರಲ್ಲದೆ, ವಿಚಾರಣೆಗೆ ಹಾಜರಾಗಲು ಸೂಚಿಸಿ ಅರ್ಜಿದಾರರಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ, ವಿಚಾರಣೆಗೆ ಹಾಜರಾಗಲು ರಣವೀರ್‌ ಸಿಂಗ್ ಸಮಯ ಕೋರಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ರಣವೀರ್‌ ಸಿಂಗ್‌ ಪರ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು, ಪೊಲೀಸರ ನೋಟಿಸ್‌ ಸ್ವೀಕರಿಸಲಾಗಿದೆ. ರಣವೀರ್‌ ಸಿಂಗ್‌ ಸದ್ಯ ವಿದೇಶದಲ್ಲಿದ್ದಾರೆ. ವಿಮಾನಗಳಿಲ್ಲದ ಕಾರಣ ಭಾರತಕ್ಕೆ ಬರಲಾಗದೆ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದಾರೆ. ಯುದ್ಧದಿಂದ ಮಧ್ಯಪ್ರಾಚ್ಯದ ಯಾವುದೇ ಭಾಗದಿಂದಲೂ ಅದರಲ್ಲೂ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರಬೇಕಿರುವ ಬಹತೇಕ ಎಲ್ಲ ವಿಮಾನಗಳ ಹಾರಾಟ ರದ್ದಾಗಿದೆ ಎಂದು ತಿಳಿಸಿದರು.

ಮುಂದುವರಿದು, ಪ್ರಕರಣದ ಖಾಸಗಿ ದೂರುದಾರನಾದ ವಕೀಲ ಪ್ರಶಾಂತ್‌ ಮೆಥಲ್‌ (ಎರಡನೇ ಪ್ರತಿವಾದಿ) ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ವಾದ ಮಂಡಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು. ಪೊಲೀಸರ ವಿಚಾರಣೆಗೆ ರಣವೀರ್‌ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಕುರಿತು ಭರವಸೆ ನೀಡುತ್ತಿದ್ದೇನೆ ಎಂದರು.

ಅಂತಿಮವಾಗಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಕಾಲಾವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿತು. ಜತೆಗೆ, ರಣವೀರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿ ಫೆಬ್ರವರಿ 24ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

Related Articles

Comments (0)

Leave a Comment