ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಮಾಜಿ ಸಚಿವ ನಾಗೇಂದ್ರಗೆ ತುರ್ತು ನೋಟಿಸ್ ಜಾರಿ
- by Jagan Ramesh
- October 24, 2024
- 115 Views
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (ಕೆಎಂವಿಎಸ್‌ಟಿಡಿಸಿಎಲ್) ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯಹಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅರ್ಜಿ ಸಂಬಂಧ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಬಿ. ನಾಗೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿ ಅಕ್ಟೋಬರ್ 14ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಪ್ರಶ್ನಿಸಿ ಇಡಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಹಾಗೂ ವಕೀಲ ಪಿ. ಪ್ರಸನ್ನ ಕುಮಾರ್, ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಈ ಪ್ರಕರಣದ ಮೊದಲ ಆರೋಪಿಯಾಗಿರುವ ನಾಗೇಂದ್ರ ಅವರಿಗೆ ಜಾಮೀನು ಮಂಜೂರು ಮಾಡುವಾಗ ವಿಶೇಷ ನ್ಯಾಯಾಲಯ ಪ್ರಮಾದವೆಸಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಆಲಿಸಿದ ನ್ಯಾಯಪೀಠ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿತು.
ಮನವಿ ಏನು?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಅವರು ನಕಲಿ ಖಾತೆ ಸೃಷ್ಟಿಸಲು ಸೂಚಿಸಿ, ಹಣ ವರ್ಗಾವಣೆ ಮಾಡಲು ನಿರ್ದೇಶಿಸಿದ್ದಾರೆ. ನಾಗೇಂದ್ರ ಸೂಚನೆಯಂತೆ ಪದ್ಮನಾಭ ಅವರಿಂದ ಹಣ ವರ್ಗಾವಣೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಒಳಸಂಚು ರೂಪಿಸಿದ್ದು, ಆನಂತರ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಚುನಾವಣೆ ಬಳಕೆಗಾಗಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕುರಿತಂತೆ ಸಾಕಷ್ಟು ಸಾಕ್ಷ್ಯಗಳನ್ನು ತನಿಖೆಯ ವೇಳೆ ಪತ್ತೆ ಮಾಡಲಾಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ 20.19 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿರುವ ಇಡಿ, ಅಕ್ರಮ ಹಣ ವರ್ಗಾವಣೆ ಕಾಯ್ದೆ – 2002ರ ಸೆಕ್ಷನ್ 45ರ ಅನುಸಾರ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ. ಆದ್ದರಿಂದ, ಪ್ರಕರಣದ ಪ್ರಮುಖ ಆರೋಪಿಯಾದ ಬಿ.ನಾಗೇಂದ್ರ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸಬೇಕು ಎಂದು ಇಡಿ ಅರ್ಜಿಯಲ್ಲಿ ಮನವಿ ಮಾಡಿದೆ.
Related Articles
Thank you for your comment. It is awaiting moderation.
Comments (0)