ಕೇತಗಾನಹಳ್ಳಿ ಸರ್ಕಾರಿ ಭೂ ಒತ್ತುವರಿ ತೆರವಿಗೆ ಎಸ್‌ಐಟಿ ರಚನೆ; ಸರ್ಕಾರದ ಆದೇಶ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಚ್‌ಡಿಕೆ
- by Prashanth Basavapatna
- June 17, 2025
- 94 Views

ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಅಂದಾಜು 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಎಸ್‌ಐಟಿ ರಚಿಸಿ ಸರ್ಕಾರ ಆದೇಶ ಹೊರಡಿಸಿದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಅಕ್ರಮ ಎಂದು ಘೋಷಿಸಬೇಕು. ಈ ಸಂಬಂಧ ಮೇ 29ರಂದು ನೀಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕುಮಾರಸ್ವಾಮಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರ ಎಸ್‌ಐಟಿ ರಚಿಸಿ ಆದೇಶಿಸಿದ ಬಳಿಕ ಅಧಿಸೂಚನೆ ಹೊರಡಿಸಲಾಗಿಲ್ಲ. ಆದ್ದರಿಂದ, ಇದರ ಭಾಗವಾಗಿ ಕೈಗೊಂಡಿರುವ ಕ್ರಮಗಳು ಕಾನೂನಬಾಹಿರವಾಗಿವೆ ಎಂದು ಅರ್ಜಿಯಲ್ಲಿ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ. ಅರ್ಜಿಯು ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಪ್ರಕರಣವೇನು?
ರಾಮನಗರ ಜಿಲ್ಲೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತವರ ಸಂಬಂಧಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿಯ ಸಂಬಂಧ ಕರ್ನಾಟಕ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳುವಂತೆ 2020ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ನ್ಯಾಯಾಲಯದ ಆದೇಶ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ಸರ್ಕಾರದ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಮಾಡಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಎಸ್‌ಐಟಿ ರಚನೆ ಕಾನೂನಿಗೆ ಅನುಗುಣವಾಗಿಲ್ಲ. ಆದ್ದರಿಂದ, ಸರ್ಕಾರದ ಆದೇಶ ರದ್ದುಗೊಳಿಸಬೇಕೆಂದು ಕೋರಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ:
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ, ಬೆಂಗಳೂರಿನ ಕಂದಾಯ ಆಯುಕ್ತಾಲಯದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಸದಸ್ಯರಾಗಿ ನೇಮಿಸಿ, ಪ್ರಾದೇಶಿಕ ಆಯುಕ್ತರ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಶೀತಲ್ ಅವರನ್ನು ಎಸ್‌ಐಟಿಯ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿ ರಾಜ್ಯ ಸರ್ಕಾರ 2025ರ ಜನವರಿ 28ರಂದು ಆದೇಶಿಸಿತ್ತು.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ಸಂಖ್ಯೆ 8, 9, 10, 16, 17 ಮತ್ತು 79ರ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಒತ್ತುವರಿ ತೆರವುಗೊಳಿಸುವ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 195 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 8ರ ಅಡಿ ಎಸ್‌ಐಟಿಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆ, ಕರ್ನಾಟಕ ಭೂ ಕಂದಾಯ ನಿಯಮಗಳು, ಕರ್ನಾಟಕ ಭೂ ಮಂಜೂರಾತಿ ನಿಯಮ ಮತ್ತು ಕರ್ನಾಟಕ ಪರಿಶೀಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವೊಂದು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ ಉಲ್ಲಂಘನೆ ಮತ್ತು ಜಲಕಾಯ, ಜಲಮೂಲ ಪ್ರದೇಶಗಳು, ಸರ್ಕಾರಿ ಖರಾಬು/ಗೋಮಾಳ ಒತ್ತುವರಿಯಾಗಿರುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲು ಎಸ್‌ಐಟಿ ರಚಿಸಲಾಗಿದೆ.
Related Articles
Thank you for your comment. It is awaiting moderation.
Comments (0)