ಜನರ ಹಣದೊಂದಿಗೆ ಆಟವಾಡುವವರನ್ನು ಸುಮ್ಮನೆ ಬಿಡಲಾಗದು; ಪರಶುರಾಮ ಪ್ರತಿಮೆ ಕಳಪೆ ಕಾಮಗಾರಿಗೆ ಹೈಕೋರ್ಟ್ ಆಕ್ರೋಶ
- by Jagan Ramesh
- September 14, 2024
- 207 Views
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪರಶುರಾಮ ಪ್ರತಿಮೆಗೆ ಕಂಚಿನ ಬದಲು ತಾಮ್ರ ಮತ್ತು ಸತು ಬಳಸಿ ಕಳಪೆ ಕಾಮಗಾರಿ ನಡೆಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಸಾರ್ವಜನಿಕರ ಹಣದ ಜತೆ ಆಟ ಆಡುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿದಿದೆ.
ಬೆಂಗಳೂರಿನ ಕಲಾವಿದ ಕೃಷ್ಣ ನಾಯಕ್ ಅವರು ತಮ್ಮ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಒಪ್ಪಂದದ ಪ್ರಕಾರ ಕಾಮಗಾರಿ ನಡೆಸದೆ, ಪ್ರತಿಮೆ ನಿರ್ಮಾಣದ ನೆಪದಲ್ಲಿ ಕೋಟ್ಯಂತರ ರೂ. ಹಣ ಲೂಟಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು. ಅರ್ಜಿ ಕುರಿತ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಕಂಚಿನ ಬದಲು ಹಿತ್ತಾಳೆ, ಸತು ಬಳಸಿದ್ದೇಕೆ?
ಅರ್ಜಿ ವಿಚಾರಣೆ ವೇಳೆ, ಪ್ರತಿಮೆ ನಿರ್ಮಿಸಲು ಹಿತ್ತಾಳೆ ಮತ್ತು ಸತುವನ್ನು ಬಳಸಲಾಗಿದೆ ಎಂಬುದನ್ನು ಅರ್ಜಿದಾರರ ಪರ ವಕೀಲರೇ ಒಪ್ಪಿಕೊಂಡರು. ಆಗ ನ್ಯಾಯಮೂರ್ತಿಗಳು, ಒಪ್ಪಂದದ ಪ್ರಕಾರ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕಿದೆ. ಹೀಗಿರುವಾಗ, ನೀವೇಕೆ ಹಿತ್ತಾಳೆ ಮತ್ತು ಸತು ಬಳಸಿದ್ದೀರಿ ಎಂದು ಪ್ರಶ್ನಿಸಿದರು. ನಿಮಗೆ (ಅರ್ಜಿದಾರರಿಗೆ) ಕೊಟ್ಟಿರುವುದು ಯಾರ ದುಡ್ಡು? ನಿಮಗೆ ನೀಡಿರುವ ಹಣ ನಿರ್ಮಿತ ಕೇಂದ್ರ ಅಥವಾ ದೂರುದಾರರಿಗೆ ಸೇರಿದ್ದಲ್ಲ. ಅದು ಜನರ ಹಣ. ನೀವು ಜನರ ಹಣದ ಜತೆ ಆಟವಾಡಲಾಗದು ಎಂದು ನ್ಯಾಯಪೀಠ ತೀವ್ರ ತರಾಟೆಗೆ ತೆಗದುಕೊಂಡಿತು.
ಪ್ರತಿಮೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ. 1.83 ಕೋಟಿ ರೂ. ಗಳಲ್ಲಿ ಈಗಾಗಲೇ 1.20 ಕೋಟಿ ರೂ. ಪಾವತಿಯಾಗಿದೆ. ಇದು ಸಾರ್ವಜನಿಕರ ಹಣ. ಅದರ ಜತೆ ಆಟ ಆಡುವವರನ್ನು ಸುಮ್ಮನೆ ಬಿಡಲಾಗದು. ಪುಣ್ಯಕ್ಕೆ ಉದ್ಘಾಟನೆಯ ಮರುದಿನವೇ ಪ್ರತಿಮೆ ಕುಸಿದು ಬಿದ್ದಿಲ್ಲ. ಅದು ಬೀಳುವ ಮುಂಚೆಯೇ ತೆರವು ಮಾಡಲಾಗಿದೆ. 35 ಅಡಿ ಎತ್ತರದ ಪ್ರತಿಮೆಯ ಭಾರವನ್ನು ಹಿತ್ತಾಳೆ ಮತ್ತು ಸತು ತಾಳುತ್ತದೆಯೇ? ಕಂಚು, ಹಿತ್ತಾಳೆ ಎರಡೂ ಒಂದೇ ಆಗುತ್ತದೆಯೇ? ಪ್ರತಿಮೆಗೆ ಕಂಚನ್ನೇ ಬಳಸಬೇಕು ಎಂದು ಹೇಳಿರುವುದಕ್ಕೆ ನಿಖರ ಕಾರಣವಿದೆ. ಹಿತ್ತಾಳೆ ಮತ್ತು ಸತು ಬಳಸಿ ಪ್ರತಿಮೆ ನಿರ್ಮಿಸಲು 1.20 ಕೋಟಿ ರೂ. ಏಕೆ ಪಡೆದಿರಿ? ಕಂಚು ಬಳಕೆ ಮಾಡದಿರುವುದು ಕ್ರಿಮಿನಲ್ ಅಪರಾಧ ಎಂದು ನ್ಯಾಯಪೀಠ ಕಟುವಾಗಿ ನುಡಿಯಿತು.
ಅಪರಾಧಿ ಯಾರೆಂದು ತಿಳಿಯಬೇಕಿದೆ:
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ನೀಡಿರುವ ವರದಿಯ ಪ್ರಕಾರ ಅರ್ಜಿದಾರರು ಪರಶುರಾಮ ಪ್ರತಿಮೆಗೆ ಕಂಚು ಬಳಸಿಲ್ಲ. ಶೇ.80 ಹಿತ್ತಾಳೆ ಮತ್ತು ಶೇ.20 ಸತು ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿದೆ. ಆದರೆ, ನಿರ್ಮಿತಿ ಕೇಂದ್ರ ಮತ್ತು ಅರ್ಜಿದಾರರು ಕಂಚು ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನಿರ್ಮಿತಿ ಕೇಂದ್ರ ಹೇಳುತ್ತಿರುವುದನ್ನು ನೋಡಿದರೆ ಇನ್ನಷ್ಟು ತನಿಖೆಯಾಗಬೇಕಿದೆ. ಜಿಲ್ಲಾಧಿಕಾರಿ ಪ್ರತಿಮೆ ತೆರವು ಮಾಡಿ ಎಂದು ಆದೇಶ ಮಾಡಿದ್ದಾರೆ. ಈ ಆದೇಶವನ್ನು ನಿರ್ಮಿತಿ ಕೇಂದ್ರವು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ತೆರವು ಮಾಡುವಂತೆ ಆದೇಶಿಸಿದ್ದನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅರ್ಜಿದಾರರಿಗೂ ಹಣ ತಲುಪಿದೆಯೋ ಗೊತ್ತಿಲ್ಲ. ಅವರ ಪಾತ್ರವೂ ಬಹಿರಂಗವಾಗಬೇಕಿದೆ. ಇದರಲ್ಲಿ ನಿಜವಾದ ಅಪರಾಧಿ ಯಾರು ಎಂಬುದು ತಿಳಿಯಬೇಕಿದೆ. ಆದ್ದರಿಂದ, ತನಿಖೆ ನಡೆಯಬೇಕಿದೆ ಎಂದರು.
ಹಿತ್ತಾಳೆ-ಸತು ಕಂಚಿಗೆ ಸಮ?:
ಅರ್ಜಿದಾರರ ಪರ ವಕೀಲರು, ಪರಶುರಾಮ ಪ್ರತಿಮೆ ತಲೆಯ ಭಾಗ ಭಾರ ತಾಳಲಾರದ್ದರಿಂದ ಅದರ ಜೋಡಣೆ ಬದಲಿಸಲಾಗಿದೆ. ಕಂಚಿನಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದ್ದು, ಅರ್ಜಿದಾರರು ತಾಮ್ರ, ಸತು ಮತ್ತು ಹಿತ್ತಾಳೆಯನ್ನು ಬಳಕೆ ಮಾಡಿದ್ದಾರೆ. ಸತು ಮತ್ತು ಹಿತ್ತಾಳೆಯು ಕಂಚಿಗೆ ಸಮನಾಗುತ್ತದೆ ಎಂದು ಸಮಜಾಯಿಷಿ ನೀಡಿದರಲ್ಲದೆ, ಕೆಲಸದ ಭಾಗವಾಗಿ 1.20 ಕೋಟಿ ರೂ. ಸ್ವೀಕರಿಸಿದ್ದೇವೆ. ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಹಲವು ಯೋಜನೆಗಳಿದ್ದು, ಅವುಗಳಲ್ಲಿ ಪರಶುರಾಮ ಪ್ರತಿಮೆಯೂ ಒಂದಾಗಿತ್ತು. ಥೀಮ್ ಪಾರ್ಕ್ ಉದ್ಘಾಟನೆಯ ಹಿನ್ನೆಲೆಯಲ್ಲಿ ಬೇಗ ಮಾಡಿ ಮುಗಿಸಲಾಗಿತ್ತು. ಆನಂತರ, ಜಿಲ್ಲಾಧಿಕಾರಿ ಅದನ್ನು ಮರುನಿರ್ಮಾಣ ಮಾಡುವಂತೆ ಸೂಚಿಸಿದ್ದಾರೆ. ಈಗ ಸರ್ಕಾರ ಇಡೀ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದರಿಂದ ಅಲ್ಲಿಗೆ ತೆರಳಿ ಕೆಲಸ ಮಾಡಲಾಗುತ್ತಿಲ್ಲ. ಅವಕಾಶ ನೀಡಿದರೆ ಕಂಚಿನಲ್ಲೇ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಲಂಚವೋ ಅಥವಾ ಉಡುಗೊರೆಯೋ?
ದೂರುದಾರ ಕೃಷ್ಣಯ್ಯ ಶೆಟ್ಟಿ ಪರ ವಕೀಲರು, ಇಲ್ಲಿ ಪ್ರತಿಮೆಯ ವಿಚಾರವಷ್ಟೇ ಇಲ್ಲ. ನಿರ್ಮಿತಿ ಕೇಂದ್ರದಿಂದ ಅರ್ಜಿದಾರರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗಿದೆ. ಕೆಲಸ ನೀಡುವುದಕ್ಕೆ ಮೊದಲೇ ಹಣ ವರ್ಗಾವಣೆಯಾಗಿದೆ. ಯಾವ ಆಧಾರದಲ್ಲಿ ಅದನ್ನು ವರ್ಗಾಯಿಸಲಾಗಿದೆ? 2019ರಲ್ಲಿ 1.34 ಕೋಟಿ ರೂ. ಹಣ ಬಿಡುಗಡೆ ಮಾಡಿದ ಬಳಿಕ ಕಾರ್ಯಾದೇಶ ನೀಡಲಾಗಿದೆ. 2022ರಲ್ಲಿ ಕಾರ್ಯಾದೇಶ ನೀಡಲಾಗಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ವೈಯಕ್ತಿಕ ಖಾತೆಗೆ ಅರ್ಜಿದಾರರು 2.27 ಲಕ್ಷ ರೂ. ವರ್ಗಾಯಿಸಿದ್ದಾರೆ. ಈ ಅಧಿಕಾರ ಎಲ್ಲಿಂದ ಬಂತು? ಇದು ಉಡುಗೊರೆಯೇ ಅಥವಾ ಲಂಚವೇ? ಅರ್ಜಿದಾರರ ಜಿಎಸ್‌ಟಿ ಖಾತೆಯನ್ನು ಸಂಬಂಧಿತ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಅಮಾನತುಗೊಳಿಸಿದೆ. ಆದ್ದರಿಂದ, ಅವರು ಕೆಲಸ ಮಾಡಲಾಗದು ಎಂದು ದಾಖಲೆ ಸಹಿತ ವಿವರಿಸಿದರು.
Related Articles
Thank you for your comment. It is awaiting moderation.
Comments (0)