ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ತಿಮರೋಡಿ

ಬೆಂಗಳೂರು: ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಎಫ್‌ಐ‌ಆರ್ ರದ್ದುಪಡಿಸುವಂತೆ ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಹಾಗೂ ದೂರದಾರ ರಾಜೀವ್‌ ಕುಲಾಲ್‌ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿದಿಯಾಗಬೇಕಿದೆ.

ತಿಮರೋಡಿ ಅರ್ಜಿಯಲ್ಲೇನಿದೆ?
ದೂರುದಾರರಾದ ರಾಜೀವ್‌ ಕುಲಾಲ್‌ ಅವರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆತನ ವಿರುದ್ಧ ನಾನು ಯಾವುದೇ ಅವಹೇಳಕಾರಿ ಹೇಳಿಕೆ ನೀಡಿಲ್ಲ. ಮೂರನೇ ವ್ಯಕ್ತಿಯಾದ ಬಿ.ಎಲ್‌. ಸಂತೋಷ್‌ ಪರವಾಗಿ ಕುಲಾಲ್‌ ದೂರು ದಾಖಲಿಸಿದ್ದಾರೆ. ಆತ ದಾಖಲಿಸಿದ ದೂರು ಆಧರಿಸಿ 2025ರ ಆಗಸ್ಟ್ 21ರಂದು ನನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಮರೋಡಿ ಆಕ್ಷೇಪಿಸಿದ್ದಾರೆ.

ದೂರು ದಾಖಲಾದ ಕೂಡಲೇ ಪೊಲೀಸರು ನನ್ನ ಪತ್ನಿಗೆ ಮೊದಲ ನೋಟಿಸ್‌ ನೀಡಿ, ಬಳಿಕ ಎರಡನೇ ನೋಟಿಸ್‌ ಸಹ ನೀಡಿದ್ದಾರೆ. ಈ ಎರಡೂ ನೋಟಿಸ್‌ ನೀಡುವ ಸಂದರ್ಭದಲ್ಲಿ ನಿಗದಿತ ನಿಯಮಗಳನ್ನು ಪಾಲಿಸಿಲ್ಲ. ನನ್ನ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನ ಮಾಹಿತಿ ಕುರಿತು ನನ್ನ ಕುಟುಂಬದವರಿಗೆ ಅರೆಸ್ಟ್‌ ಮೆಮೊ ಸಹ ನೀಡಿಲ್ಲ. ಈ ಎಲ್ಲ ಕಾರಣಗಳಿಂದ ಬಂಧನ ಪ್ರಕ್ರಿಯೆ ದೋಷಪೂರಿತವಾಗಿದ್ದು, ನನ್ನ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ:
ಬಿಜೆಪಿ ಮಂಡಳಾಧ್ಯಕ್ಷ ರಾಜೀವ್‌ ಕುಲಾಲ್‌ ಅವರು 2025ರ ಆಗಸ್ಟ್ 18ರಂದು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿ, ಆಗಸ್ಟ್ 16ರಂದು ಫೇಸ್‌ಬುಕ್‌‌ನಲ್ಲಿ ಪ್ರಸಾರವಾಗಿದ್ದ ವಿಡಿಯೊ ಒಂದರಲ್ಲಿ ಮಾತನಾಡಿದ್ದ ಮಹೇಶ್‌ ತಿಮರೋಡಿ, ಸೌಜನ್ಯಾ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡುತ್ತಾ ಬಿ.ಎಲ್‌. ಸಂತೋಷ್‌ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರು. ಆ ಮೂಲಕ ಬಿಜೆಪಿಯ ಉನ್ನತ ಪದಾಧಿಕಾರಿಯಾಗಿರುವ ಬಿ.ಎಲ್‌. ಸಂತೋಷ್‌ ಅವರ ತೇಜೋವಧೆ ಮಾಡುವಂಥ ಹೇಳಿಕೆ ನೀಡಿದ್ದಾರೆ. ಹಿಂದು ಧರ್ಮದ ನಾಯಕನನ್ನು ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ದ್ವೇಷ ಭಾವನೆ ಉಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

ದೂರು ಆಧರಿಸಿ ತಿಮರೋಡಿ ವಿರುದ್ಧ ಸಮಾಜದಲ್ಲಿ ಶಾಂತಿ ಸೌಹರ್ದತೆ ಕದಡಲು ಯತ್ನಿಸಿದ, ಉದ್ದೇಶಪೂರ್ವಕವಾಗಿ ಅವಮಾನಿಸಿದ ಮತ್ತು ಸುಳ್ಳು ಸುದ್ದಿ ಹಬ್ಬಿಸಿ ವಿವಿಧ ಸಮುದಾಯ ಹಾಗೂ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟುಮಾಡಿದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು, ಆಗಸ್ಟ್ 21ರಂದು ಅವರನ್ನು ಬಂಧಿಸಿದ್ದರು.

Related Articles

Comments (0)

Leave a Comment