ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿ ವಿವೇಚನಾಯುಕ್ತವಾಗಿದೆ; ಹೈಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್ ಪ್ರತಿಪಾದನೆ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ವಿವೇಚನಾರಹಿತವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಾಜ್ಯಪಾಲರ ಪರ ವಕೀಲರು, ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ವಿವೇಚನೆ ಬಳಸಿಯೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್ ಮುಂದೆ ಪ್ರತಿಪಾದಿಸಿದರು.

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ತಕರಾರು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಸಹಜ‌ ನ್ಯಾಯ ಪಾಲನೆ ಮಾಡಿಲ್ಲ ಎಂಬ ಅರ್ಜಿದಾರರ ಆಕ್ಷೇಪಗಳಿಗೆ ದಾಖಲೆಗಳ ಸಹಿತ ತಿರುಗೇಟು ನೀಡಿದರು.

ಶೋಕಾಸ್ ನೋಟಿಸ್ ಕಡ್ಡಾಯವಲ್ಲ:
ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಭ್ರಷ್ಟಾಚಾರ‌ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಸೆಕ್ಷನ್ 17ಎ ಅಡಿಯಲ್ಲಿ ಮೇಲ್ನೋಟಕ್ಕೆ ಅಪರಾಧ ಅಂಶಗಳು ಕಂಡು ಬರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕಾಗುತ್ತದೆ. ಈ ಹಂತದಲ್ಲಿ ಶೋಕಾಸ್ ನೋಟಿಸ್‌ ನೀಡಲೇಬೇಕೆಂಬ ನಿಯಮವಿಲ್ಲ. ಅಬ್ರಹಾಂ ಅರ್ಜಿ ಸಂಬಂಧ ಶೋಕಾಸ್ ನೋಟಿಸ್ ನೀಡಿ, ಉಳಿದ ಇಬ್ಬರ ಅರ್ಜಿಗಳ ಸಂಬಂಧ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ‌‌‌. ಆದರೆ, ಒಬ್ಬರ ದೂರಿಗೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ನೀಡಿದಾಕ್ಷಣ ಉಳಿದವರ ದೂರಿಗೂ ನೀಡಬೇಕಿಂದಿಲ್ಲ. ಮೂರೂ ದೂರುಗಳಲ್ಲಿ ಒಂದೇ ಆರೋಪ ಇರುವುದರಿಂದ ರಾಜ್ಯಪಾಲರು ತುಲನಾತ್ಮಕ ಚಾರ್ಟ್ ಸಿದ್ದಪಡಿಸಿದ್ದಾರೆ. ಹೀಗಾಗಿಯೇ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ. ಹಾಗೆ ನೋಡಿದರೆ, ಟಿ.ಜೆ.ಅಬ್ರಹಾಂ ದೂರಿಗೂ ಶೋಕಾಸ್ ನೋಟಿಸ್ ನೀಡುವುದು ಕಡ್ಡಾಯವಾಗಿರಲಿಲ್ಲ. ಹೀಗಿದ್ದರೂ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿ ವಿವರಣೆ ಕೇಳಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಕ್ಯಾಬಿನೆಟ್ ನಿರ್ಣಯ ಒಪ್ಪಲೇಬೇಕೆಂದಿಲ್ಲ:
ಸಚಿವ ಸಂಪುಟದ ನಿರ್ಣಯವನ್ನು ಏಕೆ ಒಪ್ಪಬೇಕಿಲ್ಲ ಹಾಗೂ ಅದನ್ನೇಕೆ ಪರಿಗಣಿಸಿಲ್ಲ‌ ಎಂಬ ಬಗ್ಗೆಯೂ ರಾಜ್ಯಪಾಲರು ತಮ್ಮ ಆದೇಶದಲ್ಲಿ ವಿವರವಾಗಿ ಹೇಳಿದ್ದಾರೆ. ಸಂಪುಟದ ಮಂತ್ರಿಗಳನ್ನು ಸಿಎಂ ಸೂಚನೆ ಮೇರೆಗೆ ನೀಯೋಜನೆ ಮಾಡಲಾಗುತ್ತದೆ. ಆ ಸಚಿವರು ಮುಖ್ಯಮಂತ್ರಿಗೆ ನಿಷ್ಠರಾಗಿರುತ್ತಾರೆ. ಮುಖ್ಯಮಂತ್ರಿ ವಿರುದ್ಧವೇ ಆರೋಪ ಕೇಳಿ ಬಂದಾಗ, ಸಂಪುಟದ ಸಚಿವರ ಸಲಹೆ ಹಾಗೂ ಶಿಫಾರಸನ್ನು ರಾಜ್ಯಪಾಲರು ಒಪ್ಪಬೇಕಿಲ್ಲ ಹಾಗೂ‌ ಪರಿಗಣಿಸಬೇಕಿಲ್ಲ. ಆದರೂ, ಸಚಿವ ಸಂಪುಟದ ಸಲಹೆಯನ್ನು‌ ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಸಿಎಂ ಭಾಗವಹಿಸದಿದ್ದರೂ, ಅವರೇ ನೇಮಿಸಿದ ಡಿಸಿಎಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತಹ ಸಭೆಯ ನಿರ್ಣಯ‌ ತಾರತಮ್ಯದಿಂದ ಕೂಡಿರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳಬಹುದು ಎಂದು ತುಷಾರ್ ಮೆಹ್ತಾ ತಿಳಿಸಿದರು.

ದಾಖಲೆಗಳನ್ನು ಪರಿಶೀಲಿಸಿಯೇ ಕ್ರಮ:
ರಾಜ್ಯಪಾಲರು ತರಾತುರಿಯಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎನ್ನುವುದು ಮುಖ್ಯಮಂತ್ರಿಗಳ ಪರ ವಕೀಲರ ವಾದವಾಗಿದೆ. ಆದರೆ, ರಾಜ್ಯಪಾಲರ ಕಡತಗಳನ್ನು ಗಮನಿಸಿದರೆ, ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ವಿವೇಚನೆ ಬಳಸಿಯೇ ತೀರ್ಮಾನ ಕೈಗೊಂಡಿರುವುದು ಕಂಡುಬರುತ್ತದೆ. ಆಗಸ್ಟ್ 14ರಂದೇ ಎಲ್ಲ ಕಡತ ಪರಿಶೀಲಿಸಿ, ಪ್ರತಿ ಹಂತದಲ್ಲೂ ಟಿಪ್ಪಣಿ ಮಾಡಿಟ್ಟುಕೊಂಡಿದ್ದಾರೆ. ದೂರಿನ ವಿವರ, ಸಚಿವ ಸಂಪುಟದ ಸಲಹೆ, ತಮ್ಮ ಅಭಿಪ್ರಾಯ ಎಲ್ಲವನ್ನೂ ದಾಖಲಿಸಿರುವ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆದೇಶ ಮಾಡಿದ್ದಾರೆ. ಅದನ್ನು ತನಿಖೆಗೆ ನೀಡಿರುವ ಅನುಮತಿ ಎಂದಷ್ಟೇ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸಚಿವ ಸಂಪುಟದ್ದು ಕಾಪಿ-ಪೇಸ್ಟ್ ನಿರ್ಣಯ:
ರಾಜ್ಯಪಾಲರಿಗೆ 91 ಪುಟಗಳ ಸಚಿವ ಸಂಪುಟದ ತೀರ್ಮಾನ ಸಲ್ಲಿಸಲಾಗಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಅತಿದೊಡ್ಡ ಸಚಿವ ಸಂಪುಟದ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ ರಾಜ್ಯ ಅಡ್ವೋಕೇಟ್ ಜನರಲ್‌ಗೆ (ಎಜಿ) ಕಳುಸಹಿಸಿದ್ದಾರೆ.‌ ಅದರ ಆಧಾರದ ಮೇಲೆ ಎಜಿ ಅಭಿಪ್ರಾಯ ನೀಡಿದ್ದಾರೆ. ಆ ಅಭಿಪ್ರಾಯವನ್ನು ಕ್ಯಾಬಿನೆಟ್ ಅಕ್ಷರಶಃ ಕಾಪಿ (ನಕಲು) ಮಾಡಿದೆ. ಎಜಿ ಅಭಿಪ್ರಾಯವನ್ನು ಅಲ್ಪ ವಿರಾಮ, ಪೂರ್ಣವಿರಾಮಗಳನ್ನೂ ಬಿಡದೇ ಯಥಾವತ್ತಾಗಿ ಅಂಗೀಕರಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈಗ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಪ್ರಚಲಿತದಲ್ಲಿದೆ. ಕಾಪಿ-ಪೇಸ್ಟ್ ಮಾಡುವಾಗ ಎಐ ನೆರವನ್ನಾದರೂ ಪಡೆಯಬಹುದಿತ್ತು. ಆದರೆ, ಅದ್ಯಾವುದನ್ನೂ ಮಾಡದೆ ಎಜಿ ಅವರ ಅಭಿಪ್ರಾಯವನ್ನೇ ಸಂಪುಟದ ನಿರ್ಣಯದ ಹೆಸರಿನಲ್ಲಿ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ರಾಜ್ಯ ಸಂಪುಟದ ಸಚಿವರಾಗಲೀ, ಮುಖ್ಯಮಂತ್ರಿಗಳಾಗಲೀ ತಮ್ಮ ವಿವೇಚನೆಯನ್ನೇ ಬಳಸಿಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಪಾತ್ರವಿಲ್ಲವಾದರೆ ಚಿಂತೆ ಏಕೆ?
ರಾಜ್ಯಪಾಲರ ಬಗ್ಗೆ ಫ್ರೆಂಡ್ಲೀ ಗವರ್ನರ್, ಕಾಮಿಕಲ್ ಎಂಬ ಶಬ್ದಗಳನ್ನು ಅರ್ಜಿದಾರರ ಪರ ವಕೀಲರು ಮಾಡಿದ್ದಾರೆ. ಆದರೆ, ಸಿಎಂ ಬಗ್ಗೆ ನಾವು ಅಂತಹ ಪದ ಬಳಸುವುದಿಲ್ಲ. ಸಾಂವಿಧಾನಿಕ ಹುದ್ದೆಗಳ ಬಗ್ಗೆ ಗೌರವ ಇರಬೇಕು. ಕೆಲವೊಮ್ಮೆ ದೂರುಗಳ ಬಗ್ಗೆ ತ್ವರಿತವಾಗಿ ಪ್ರತಿಕ್ರಿಯಿಸಬೇಕಿರುತ್ತದೆ. ಹಾಗಾಗಿ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯೊಂದಿಗೆ ಲಗತ್ತಿಸಿದ್ದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಆದೇಶ ಮಾಡಿದ್ದಾರೆ. ಎಲ್ಲ ಅಂಶಗಳು ಕಡತದಲ್ಲಿ‌ರುವಾಗ ಅದನ್ನು ಆದೇಶದಲ್ಲಿ ಹೇಳಬೇಕೆಂದಿಲ್ಲ. ಅರ್ಜಿದಾರರು ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ತಾವು ಯಾವುದೇ ಶಿಫಾರಸು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಅವರು ಚಿಂತಿಸುತ್ತಿರುವುದೇಕೆ, ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ ಎಂದ ಮೆಹ್ತಾ ರಾಜ್ಯಪಾಲರ ಪರವಾಗಿ ತಮ್ಮ ವಾದ ಪೂರ್ಣಗೊಳಿಸಿದರು.

Related Articles

Comments (0)

Leave a Comment