ಮುಡಾ ಪ್ರಕರಣದ ಫಲಾನುಭವಿ ಸಿಎಂ ಪತ್ನಿಯಾಗಿದ್ದು, ನಿಸ್ಸಂದೇಹವಾಗಿ ತನಿಖೆಯ ಅಗತ್ಯವಿದೆ – ಹೈಕೋರ್ಟ್

ಬೆಂಗಳೂರು: ಮುಡಾ ಪ್ರಕರಣದ ಫಲಾನುಭವಿ ಹೊರಗಿನವಲ್ಲ. ಸ್ವತಃ ಮುಖ್ಯಮಂತ್ರಿಗಳ ಪತ್ನಿಯಾಗಿದ್ದಾರೆ. ಆದ್ದರಿಂದ, ನಿಸ್ಸಂದೇಹವಾಗಿ ಪ್ರಕರಣದ ತನಿಖೆ ನಡೆಯುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಪೂರ್ವಾನುಮತಿ (ಅನುಮೋದನೆ) ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಭ್ರಷ್ಟಾಚಾರ ನಿಯಂತ್ರಣ (ಪಿಸಿ) ಕಾಯ್ದೆ-1988ರ ಸೆಕ್ಷನ್‌ 17ಎ ಅಡಿ ತನಿಖೆ ನಡೆಸಲು ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್ಎಸ್‌) ಸೆಕ್ಷನ್‌ 218 ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿ ರಾಜ್ಯಪಾಲರು ಆಗಸ್ಟ್ 17ರಂದು ಹೊರಡಿಸಿದ್ದ ಆದೇಶ ರದ್ದುಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ಅರ್ಜಿ ಕುರಿತು ಸುದೀರ್ಘ ವಾದ-ಪ್ರತಿವಾದ ಆಲಿಸಿ, ಕಾಯ್ದಿರಿಸಿದ್ದ ತೀರ್ಪನ್ನು ಮಂಗಳವಾರ ಪ್ರಕಟಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಫಲಾನುಭವಿ ಸ್ವತಃ ಮುಖ್ಯಮಂತ್ರಿಗಳ ಪತ್ನಿಯಾಗಿರುವುದರಿಂದ ನಿಸ್ಸಂದೇಹವಾಗಿ ತನಿಖೆ ನಡೆಯುವ ಅಗತ್ಯವಿದೆ ಎಂದು 197 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ತೀರ್ಪಿಗೆ ತಡೆ‌ ನೀಡಲು ನಕಾರ:
ತೀರ್ಪು ಪ್ರಕಟವಾಗುತ್ತಿದ್ದಂತೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರಗಳ ಕಾಲ ನಿಮ್ಮ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಡಾ.ಅಭಿಷೆಕ್‌ ಮನುಸಿಂಘ್ವಿ ಅವರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನು ಕೋರಿದರು. ಅದಕ್ಕೆ ನಿರಾಕರಿಸಿದ ನ್ಯಾಯಮೂರ್ತಿಗಳು, ನನ್ನ ಆದೇಶಕ್ಕೆ ನಾನೇ ಹೇಗೆ ತಡೆಯಾಜ್ಞೆ ನೀಡುವುದು. ಆದೇಶ ಪ್ರತಿಯನ್ನು ಮಧ್ಯಾಹ್ನ 2.30ರ ಒಳಗೆ ಬಿಡುಗಡೆ ಮಾಡಲಾಗುವುದು. ಅದನ್ನು ಆಧರಿಸಿ ಮೇಲ್ಮನವಿ ಸಲ್ಲಿಸಬಹುದು ಎಂದರು.

ತನಿಖೆಗಷ್ಟೇ ಸೀಮಿತ:
ಇದೇ ವೇಳೆ, ರಾಜ್ಯಪಾಲರ ಆದೇಶವನ್ನು ಪಿಸಿ ಕಾಯ್ದೆ ಸೆಕ್ಷನ್‌ 17 ಎ ಅಡಿಗೆ ನಿರ್ಬಂಧಿತವಾಗಿ ಓದಬೇಕಿದೆಯೇ ಹೊರತು ಬಿಎನ್‌ಎಸ್ಎಸ್‌ ಸೆಕ್ಷನ್‌ 218 ಅಡಿಯ ಪ್ರಾಸಿಕ್ಯೂಷನ್‌‌ಗೆ ಅನುಮೋದನೆ ನೀಡಿರುವ ಆದೇಶವಾಗಿ ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಂದರೆ, ಮುಖ್ಯಮಂತ್ರಿಗಳ ವಿರುದ್ಧ ಪೊಲೀಸ್‌ ತನಿಖೆಗೆ ಸೀಮಿತವಾಗಿ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದಾಗಿ ಪರಿಗಣಿಸಬೇಕಿದೆ. ಪ್ರಕರಣದ ತನಿಖೆ ಇನ್ನೂ ಆರಂಭವಾಗಿರದ ಕಾರಣ ಸದ್ಯದ ಮಟ್ಟಿಗೆ ಪ್ರಾಸಿಕ್ಯೂಷನ್‌ ಲ‌ಗೆ ಅನುಮತಿ ನೀಡಿರುವ ಸಂಗತಿ ದೂರ ಉಳಿಯಲಿದೆ.

ತೀರ್ಪಿನ ಸಾರಾಂಶ:
ಪ್ರಕರಣದಲ್ಲಿ ಹಲವು ವಿಚಾರಗಳು ಚರ್ಚೆಯಾಗಿದ್ದರೂ ನ್ಯಾಯಾಲಯ ಪ್ರಮುಖವಾಗಿ 8 ಪ್ರಶ್ನೆಗಳನ್ನು ರಚಿಸಿಕೊಂಡು, ತೀರ್ಪಿನ ಸಾರಾಂಶವನ್ನು 11 ಅಂಶಗಳಲ್ಲಿ ಉತ್ತರಿಸಿ, ರಾಜ್ಯಪಾಲರ ಪೂರ್ವಾನುಮತಿ ಆದೇಶವನ್ನು ಊರ್ಜಿತಗೊಳಿಸಿದೆ.

1. ದೂರುದಾರರು ದೂರು ದಾಖಲಿಸಿರುವ ಅಥವಾ ರಾಜ್ಯಪಾಲರಿಂದ ಪೂರ್ವಾನುಮತಿ ಕೋರಿದ ಕ್ರಮ ಸಮರ್ಥನೀಯವಾಗಿದೆ.

2. ವಾಸ್ತವ ಪರಿಸ್ಥಿತಿಯಲ್ಲಿ ಪ್ರಕರಣದ ತನಿಖೆಗೆ ಪಿಸಿ ಕಾಯ್ದೆಯ ಸೆಕ್ಷನ್‌ 17ಎ ಅಡಿಯಲ್ಲಿ ಪೂರ್ವಾನುಮತಿ ಕಡ್ಡಾಯ.

3. ಪಿಸಿ ಕಾಯ್ದೆಯ ಅಡಿಯ ಅಪರಾಧಗಳ ಸಂಬಂಧ ಸಾರ್ವಜನಿಕ ಸೇವಕರ ವಿರುದ್ಧದ ಆರೋಪಗಳ ಕುರಿತು ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಬಿಎನ್‌ಎಸ್ಎಸ್‌ ಸೆಕ್ಷನ್‌ 223ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಿದ ಸಂದರ್ಭದಲ್ಲಿ ಸೆಕ್ಷನ್‌ 17ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಕೋರುವುದು ದೂರುದಾರನ ಜವಾಬ್ದಾರಿಯಾಗಿರುತ್ತದೆ. ಪೊಲೀಸ್‌ ಅಧಿಕಾರಿಯೂ ಪೂರ್ವಾನುಮತಿ ಕೋರುವ ಅಗತ್ಯವಿಲ್ಲ.

4. ಸಂವಿಧಾನದ ಪರಿಚ್ಛೇದ 163ರ ಪ್ರಕಾರ ರಾಜ್ಯಪಾಲರು ಸಾಮಾನ್ಯ ಸಂದರ್ಭದಲ್ಲಿ ಸಚಿವ ಸಂಪುಟದ ನೆರವು ಹಾಗೂ ಸಲಹೆ ಆಧಾರದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ, ಅಸಾಧಾರಣ ಸಂದರ್ಭದಲ್ಲಿ ರಾಜ್ಯಪಾಲರು ಸ್ವತಂತ್ರ ನಿರ್ಧಾರಗಳನ್ನೂ ತೆಗೆದುಕೊಳ್ಳಬಹುದು. ಹಾಲಿ ಪ್ರಕರಣವು ಅಂತಹ ಅಸಾಧಾರಣ ಸಂದರ್ಭದ್ದಾಗಿದೆ.

5. ರಾಜ್ಯಪಾಲರು ಕೈಗೊಂಡಿರುವ ಸ್ವತಂತ್ರ ನಿರ್ಧಾರದಲ್ಲಿ ಯಾವುದೇ ಲೋಪ ಕಂಡು ಬರುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಪ್ರಾಧಿಕಾರ (ಸಕ್ಷಮ ಪ್ರಾಧಿಕಾರ) ಅದರಲ್ಲೂ ರಾಜ್ಯಪಾಲರಂತಹ ಉನ್ನತ ಕಚೇರಿಯು ಕಡತದಲ್ಲಿರುವ ಕಾರಣಗಳನ್ನು ದಾಖಲಿಸಿದರೆ ಸಾಕಾಗುತ್ತದೆ. ಆ ಕಾರಣಗಳು ರಾಜ್ಯಪಾಲರ ಆದೇಶದ ಭಾಗದಲ್ಲಿ ಸಂಕ್ಷಿಪ್ತವಾಗಿದೆ. ಕಾರಣಗಳು ಕಡತದಲ್ಲಿರಬೇಕು. ಮೊದಲ ಬಾರಿಗೆ ಕಾರಣಗಳನ್ನು ಆಕ್ಷೇಪಣೆಗಳ ಮೂಲಕ ಸಾಂವಿಧಾನಿಕ ನ್ಯಾಯಾಲಯದ ಮುಂದೆ ತರಲಾಗುವುದಿಲ್ಲ.

6. ರಾಜ್ಯಪಾಲರ ಆದೇಶ ಎಲ್ಲಿಯೂ ವಿವೇಚನಾರಹಿತವಾಗಿಲ್ಲ.

7. ರಾಜ್ಯಪಾಲರು ವಿವೇಚನೆ ಬಳಸಿರದ ಪ್ರಕರಣ ಇದಾಗಿಲ್ಲ. ರಾಜ್ಯಪಾಲರು ಸಂಪೂರ್ಣ ವಿವೇಚನೆಯುತವಾಗಿ ಆದೇಶ ಹೊರಡಿಸಿದ್ದಾರೆ.

8. ಪೂರ್ವಾನುಮತಿ ನೀಡುವ ಮುನ್ನ ವಿಚಾರಣೆಯ ಅವಕಾಶವನ್ನು ನೀಡುವುದು ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿಯಲ್ಲಿ ಕಡ್ಡಾಯವಲ್ಲ. ಸಕ್ಷಮ ಪ್ರಾಧಿಕಾರವು ಅವಕಾಶ ನೀಡಲು ಬಯಸಿದರೆ, ಆ ಆಯ್ಕೆ ಸದಾ ಮುಕ್ತವಾಗಿರುತ್ತದೆ.

9. ರಾಜ್ಯಪಾಲರು ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾದ ಆರೋಪ ಇಡೀ ಆದೇಶವನ್ನು ಕಲುಷಿತಗೊಳಿಸುವುದಿಲ್ಲ.

10. ರಾಜ್ಯಪಾಲರು ಆದೇಶವನ್ನು ಸೆಕ್ಷನ್‌ 17ಎ ಅಡಿ ಪೂರ್ವಾನುಮತಿ ನೀಡಿರುವುದಕ್ಕೆ ಮಾತ್ರ ಸೀಮಿತವಾಗಿ ಓದಲಾಗಿದೆ. ಬಿಎನ್‌ಎಸ್ಎಸ್‌ ಸೆಕ್ಷನ್‌ 218 ಅಡಿ ನೀಡುವ ಆದೇಶವಲ್ಲ.

11. ಅರ್ಜಿಯಲ್ಲಿ ವಿವರಿಸಲಾಗಿರುವ ವಾಸ್ತವಾಂಶಗಳನ್ನು ಪರಿಶೀಲಿಸಿದರೆ ಪ್ರಕರಣದಲ್ಲಿ ಫಲಾನುಭವಿ ಹೊರಗಿನವರಲ್ಲ. ಮುಖ್ಯಮಂತ್ರಿಗಳ ಪತ್ನಿಯಾಗಿದ್ದಾರೆ. ಆದ್ದರಿಂದ, ನಿಸ್ಸಂದೇಹವಾಗಿ ಪ್ರಕರಣದ ತನಿಖೆ ನಡೆಸುವ ಅಗತ್ಯವಿದೆ.

Related Articles

Comments (0)

Leave a Comment