ಮುಡಾ ವಶಪಡಿಸಿಕೊಂಡಿದ್ದ ಭೂಮಿ ಮರಳಿ ಕೃಷಿ ಭೂಮಿಯಾಗಿದ್ದು ಮ್ಯಾಜಿಕ್ – ಹಿರಿಯ ವಕೀಲ ಮಣಿಂದರ್ ಸಿಂಗ್

ಬೆಂಗಳೂರು: ಅಭಿವೃದ್ಧಿಪಡಿಸುವ ಉದ್ದೇಶದಿಂದ ಮುಡಾ ವಶಪಡಿಸಿಕೊಂಡಿರುವ ಭೂಮಿ ಮತ್ತೆ ಕೃಷಿ ಭೂಮಿಯಾಗಿರುವುದೇ ಒಂದು ಜಾದೂ (ಮ್ಯಾಜಿಕ್) ಎನಿಸಿದೆ ಎಂದು ಹಿರಿಯ ವಕೀಲ ಮಣಿಂದರ್ ಸಿಂಗ್ ಕುಹಕವಾಡಿದರು.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ದೂರುದಾರರಲ್ಲೊಬ್ಬರಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ವಾದ ಮಂಡಿಸಿದರು.

ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರದು ಎನ್ನಲಾಗುತ್ತಿರುವ 3.16 ಎಕರೆ ವಿವಾದಿತ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು 1992ರಲ್ಲಿ ಆರಂಭಿಸಿದ್ದ ಮುಡಾ, ಆನಂತರ ಅದನ್ನು ವಶಪಡಿಸಿಕೊಂಡಿತ್ತು. 1998ರ ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ಭೂಮಿಯ ಮಾಲೀಕತ್ವ ಮುಡಾ ಹೆಸರಿನಲ್ಲಿದೆ. ಸೆಕ್ಷನ್ 48ರ ಅಡಿ ಆ ಭೂಮಿಯನ್ನು ಬಿಡುಗಡೆ ಮಾಡಲಾಗಿದೆ. ಒಮ್ಮೆ ಸರ್ಕಾರದ ಭೂಮಿ ಎಂದು ಕಂದಾಯ ದಾಖಲೆಗಳಲ್ಲಿ ನಮೂದಾದರೆ ಪರಿಹಾರ ಪಡೆಯಲು ಹೊರತುಪಡಿಸಿ, ಆನಂತರ ನಡೆಯುವ ಯಾವುದೇ ವರ್ಗಾವಣೆ ಅಕ್ರಮವಾಗುತ್ತದೆ. ವಿವಾದಿತ ಭೂಮಿಯು ಮುಡಾ ಮಾಲೀಕತ್ವಕ್ಕೆ ಒಳಪಟ್ಟಿದೆ ಎಂದು ದಾಖಲಾಗಿದ್ದು, ಆನಂತರ ಬಿಡುಗಡೆ ಅಧಿಸೂಚನೆಯಾಗಿದೆ. 2001ರಿಂದ 2004ರವರೆಗೆ ಅಭಿವೃದ್ಧಿ ಯೋಜನೆಯಡಿ ಅದನ್ನು ಅಭಿವೃದ್ಧಿಪಡಿಸಲಾಗಿತ್ತು. ನಿವೇಶನ ಮಾಡಿ ಕ್ರಯ ಪತ್ರ ನೀಡಲಾಗಿತ್ತು ಎಂದು ಮಣಿಂದರ್ ಸಿಂಗ್ ನ್ಯಾಯಾಲಯಕ್ಕೆ ವಿವರಿಸಿದರು.

ಮತ್ತೆ ಕೃಷಿ ಭೂಮಿಯಾಗಿದ್ದೇ ಮ್ಯಾಜಿಕ್:
ಈ ಮಧ್ಯೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ವಶಪಡಿಸಿಕೊಳ್ಳಲಾದ ಭೂಮಿ ಮತ್ತೆ ಹೇಗೆ ಕೃಷಿ ಭೂಮಿ ಆಯಿತು ಎಂದು ಪ್ರಶ್ನಿಸಿದರು. ಅದಕ್ಕೆ ಸಿಂಗ್ ಅವರು, ಅದೇ ಇಲ್ಲಿರುವ ಮ್ಯಾಜಿಕ್ ಎಂದರು. ಮುಂದುವರಿದು, ತನಿಖೆಗೆ ಇದು ಸೂಕ್ತ ಪ್ರಕರಣ. ಸರ್ಕಾರದ ಎಲ್ಲ ವಿಭಾಗಗಳು ಒಂದೇ ರೀತಿಯ ಪ್ರತಿಕ್ರಿಯೆ ಸಲ್ಲಿಸಿದರೆ ರಾಜ್ಯ ಸರ್ಕಾರದ ಅಂಗ ಸಂಸ್ಥೆ ಹೇಗೆ ತನಿಖೆ ನಡೆಸುತ್ತದೆ? ಭೂಮಿಯ ಡಿನೋಟಿಫಿಕೇಶನ್ ಒಪ್ಪಬೇಕೆ ಅಥವಾ ಬೇಡವೇ ಎಂಬ ಕುರಿತು ನ್ಯಾಯಾಲಯ ನಿರ್ಧರಿಸಬೇಕಿದೆ. ಇದೇ ತನಿಖೆಯ ವಸ್ತುವಾಗಿರಲಿದೆ. ಸೆಕ್ಷನ್ 48ರ ಅಡಿ ಭೂಮಿ ಬಿಡುಗಡೆ ಮಾಡಿರುವುದನ್ನು ನಾನು ಸಮರ್ಥಿಸುತ್ತಿಲ್ಲ. ಅದು ಅಸಾಧ್ಯ ಎಂಬುದನ್ನು ತೋರ್ಪಡಿಸುತ್ತಿದ್ದೇನೆ. ಇಲ್ಲಿ ಕರಾಮತ್ತು ನಡೆದಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿ ತಮ್ಮ ವಾದ ಪೂರ್ಣಗೊಳಿಸಿದರು.

ಸಂವಿಧಾನದ ರಕ್ಷಣೆಯೂ ರಾಜ್ಯಪಾಲರ ಜವಾಬ್ದಾರಿ:
ಮತ್ತೊಬ್ಬ ದೂರುದಾರ ಎಸ್.ಪಿ. ಪ್ರದೀಪ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಅನುಸಾರ ಕರ್ತವ್ಯವನ್ನು ನಿರ್ವಹಿಸುವುದು ಮಾತ್ರವೇ ಅಲ್ಲದೆ ಸಂವಿಧಾನದ ರಕ್ಷಕರಾಗಿಯೂ ತಮ್ಮ ಕಚೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ ಎಂದು ತಿಳಿಸಿದರಲ್ಲದೆ, ಮುಡಾ ಅಕ್ರಮ ತನಿಖೆಗಾಗಿ ಏಕಸದಸ್ಯ ಆಯೋಗ ಮತ್ತು ತನಿಖಾ ತಂಡ ನೇಮಿಸಿರುವ ಸರ್ಕಾರದ ಆದೇಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಈ ಆದೇಶಗಳಲ್ಲಿ ಮೇಲ್ನೋಟಕ್ಕೆ ಅಕ್ರಮವನ್ನು ಪರಿಗಣಿಸಲಾಗಿದೆ ಎನ್ನುವ ಅಂಶ ಇರುವುದನ್ನು ಉಲ್ಲೇಖಿಸಿದ ನಾವದಗಿ, ರಾಜ್ಯಪಾಲರು ಕಾರ್ಯವಿಧಾನ ಅನುಸರಿಸಿಲ್ಲ ಎನ್ನುವುದು ಬೇರೆ. ಆದರೆ, ವಿವೇಚನೆ ಬಳಸಿಲ್ಲ ಎನ್ನಲಾಗದು. ತನಿಖೆಗೆ ನೇಮಿಸಿರುವ ಸರ್ಕಾರದ ಆದೇಶಗಳನ್ನು ರಾಜ್ಯಪಾಲರು ಗಮನಿಸಿದ್ದಾರೆ. ಹೀಗಿರುವಾಗ, ಅವರು ಅವರು ವಿವೇಚನೆ ಬಳಸಿಲ್ಲ ಎನ್ನಲಾಗದು ಎಂದರು.

ಅಸ್ತಿತ್ವದಲ್ಲಿರದ ಭೂಮಿಗೆ ದಾನಪತ್ರ ಮಾಡಿದ್ದು ಹೇಗೆ?
ಪ್ರಕರಣದಲ್ಲಿ ಮೂರನೇ ಪ್ರತಿವಾದಿಯಾಗಿರುವ ದೂರುದಾರ ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿ, ವಿವಾದಿತ ಭೂಮಿಯನ್ನು ಮುಖ್ಯಮಂತ್ರಿಗಳ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ 2004ರಲ್ಲಿ ಖರೀದಿ ಮಾಡಿದ್ದರು. ಆಗ ಆ ಜಾಗದಲ್ಲಿ ಕೆಸರೆ ಗ್ರಾಮ ಎಂಬುದು ಅಸ್ತಿತ್ವದಲ್ಲಿಯೇ ಇರಲಿಲ್ಲ. ಅಸ್ತಿತ್ವದಲ್ಲಿಲ್ಲದ ಗ್ರಾಮದ, ಅಸ್ತಿತ್ವದಲ್ಲಿಲ್ಲದ ಜಾಗವನ್ನು ಖರೀದಿ ಮಾಡಲಾಗಿದ್ದು, ಈ ರೀತಿ ಪಡೆದ ಅಸ್ತಿತ್ವದಲ್ಲಿಲ್ಲದ ಕೃಷಿ ಭೂಮಿಯನ್ನು 2005ರಲ್ಲಿ ಭೂಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಅದನ್ನು ಮಲ್ಲಿಕಾರ್ಜುನಸ್ವಾಮಿ ದಾನಪತ್ರದ ಮೂಲಕ ಮುಖ್ಯಮಂತ್ರಿಗಳ ಪತ್ನಿಯಾದ ತಮ್ಮ ಸಹೋದರಿಗೆ ನೀಡಿದ್ದಾರೆ. ಅಸ್ತಿತ್ವದಲ್ಲಿರದ ಭೂಮಿಯನ್ನು ಹೇಗೆ ದಾನ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ವಿವಾದಿತ ಭೂಮಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ವೇಳೆಯಲ್ಲಿ ಅರ್ಜಿದಾರರು ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ ಅಗಿದ್ದರು. ಅಸ್ತಿತ್ವದಲ್ಲಿಯೇ ಇಲ್ಲದ ಭೂಮಿಗೆ, ಮುಡಾ ತನ್ನ ಹೆಸರಿನಲ್ಲಿ ಹಕ್ಕುಪತ್ರ ಹೊಂದಿರುವ ಭೂಮಿಗೆ ಪರಿಹಾರವಾಗಿ ಮುಖ್ಯಮಂತ್ರಿಗಳ ಪತ್ನಿಗೆ 14 ನಿವೇಶನಗಳನ್ನು ನೀಡಲಾಗಿದೆ. ಇಲ್ಲಿ ಮುಖ್ಯಮಂತ್ರಿ ಕಚೇರಿಯ ಪಾತ್ರ ವಿವಿಧ ಹಂತಗಳಲ್ಲಿದೆ. ಮುಖ್ಯಮಂತ್ರಿಗಳು ಪ್ರಭಾವ ಬೀರಿರುವುದು ಅವರ ಅಧಿಕೃತ ಕರ್ತವ್ಯದ ಭಾಗವಲ್ಲದೆ ಇರುವುದರಿಂದ ರಾಜ್ಯಪಾಲರ ಅನುಮತಿಯ ಕುರಿತಾದ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಇಲ್ಲಿ ಅನ್ವಯವಾಗುವುದಿಲ್ಲ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅರ್ಜಿ ವಿಚಾರಣೆಯನ್ನು ಸೋಮವಾರ ಮಧ್ಯಾಹ್ಕಕ್ಕೆ ಮುಂದೂಡಿತಲ್ಲದೆ, ಅರ್ಜಿ ಸಂಬಂಧ ಆಗಸ್ಟ್ 19ರಂದು ನೀಡಿದ್ದ ಮಧ್ಯಂತರ ಆದೇಶವನ್ನೂ ವಿಸ್ತರಿಸಿತು.

Related Articles

Comments (0)

Leave a Comment