ಬಡತನದ ಲಾಭ ಪಡೆದು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ವೃದ್ಧನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
- by Jagan Ramesh
- October 7, 2025
- 149 Views

ಬೆಂಗಳೂರು: ಸಂತ್ರಸ್ತೆಯ ಬಡತನ, ಮುಗ್ಧತೆ ಹಾಗೂ ಆಕೆಯ ಸಮುದಾಯವನ್ನು ನೋಡಿ ಲೈಂಗಿಕ ದೌರ್ಜನ್ಯ ಎಸಗುವುದು ನಿರ್ದಯದ ಕೃತ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ 68 ವರ್ಷದ ವ್ಯಕ್ತಿಗೆ ಜಾಮೀನು ನಿರಾಕರಿಸಿದೆ.
ಜಾಮೀನು ಕೋರಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಚನ್ನಪ್ಪರ್ ಅಲಿಯಾಸ್ ರಾಜಯ್ಯ ಅಲಿಯಾಸ್ ಅಂಗಡಿ ರಾಜ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಸಂತ್ರಸ್ತೆ ನೀಡಿರುವ ಹೇಳಿಕೆಯ ಪ್ರಕಾರ, ಮೊದಲಿಗೆ ಸೋದರ ಸಂಬಂಧಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆನಂತರ ತಿಂಡಿ ಮತ್ತು ಹೊಸ ಉಡುಪುಗಳನ್ನು ಕೊಡಿಸುವುದಾಗಿ ಪುಸಲಾಯಿಸಿ ಮೇಲ್ಮನವಿದಾರ ಮತ್ತು ಇತರರು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಪ್ರಾಪ್ತೆಯ ಬಡತನ, ಮುಗ್ಧತೆ ಮತ್ತು ನಿರ್ದಿಷ್ಟವಾಗಿ ಆಕೆಯ ಸಮುದಾಯದ ಹಿನ್ನೆಲೆ ಅರಿತುಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಅತ್ಯಂತ ಕ್ರೂರ ಕೃತ್ಯವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಸಂತ್ರಸ್ತೆಯ ಮೇಲೆ ಆರೋಪಿಗಳು ಅದರಲ್ಲೂ ಮೇಲ್ಮನವಿದಾರ ಎಸಗಿರುವ ಹೀನ ಕೃತ್ಯವನ್ನು ಖಂಡಿಸಬೇಕಿದೆ. ವಯಸ್ಸಿನಲ್ಲಿ ಸಾಕಷ್ಟು ಹಿರಿಯನಾಗಿರುವ ಆರೋಪಿಯು ಇಂಥ ಕೃತ್ಯ ಎಸಗದಂತೆ ಇತರರಿಗೆ ಜಾಗೃತಿ ಮೂಡಿಸಬೇಕು, ಇಲ್ಲವೇ ಇಂಥ ಕೃತ್ಯವನ್ನು ತಡೆಯುವ ಸಂಬಂಧ ಗ್ರಾಮದ ಹಿರಿಯರ ಗಮನಕ್ಕೆ ತರಬೇಕು. ಅದರ ಬದಲಿಗೆ, ಆತನೇ ಘಾತಕ ಕೃತ್ಯ ಎಸಗಿದ್ದಾನೆ ಎಂದು ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಮೇಲ್ಮನವಿದಾರನು ಜಾಮೀನಿನ ಮೇಲೆ ಬಿಡುಗಡೆ ಹೊಂದಲು ಅರ್ಹನಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿದೆ.
ಪ್ರಕರಣವೇನು?
ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಅಪ್ರಾಪ್ತೆಯ ತಾಯಿ, ಮಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಧರಿಸಿರುವುದು ಖಾತ್ರಿಯಾಗಿದೆ. ಈ ಸಂಬಂಧ ಆಕೆಯನ್ನು ವಿಚಾರಿಸಿದಾಗ ಇದಕ್ಕೆ ಐವರು ಕಾರಣ ಎಂದು ಹೇಳಿದ್ದಳೆಂದು ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಐವರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ರಾಜಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಡ್ಯ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು 2025ರ ಜುಲೈ 15ರಂದು ವಜಾಗೊಳಿಸಿದ್ದರು. ಇದರಿಂದ, ಆರೋಪಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.
ಆರೋಪಿಯ ವಾದವೇನು?
ಆರೋಪಿಯ ಪರ ವಕೀಲ ಎಚ್.ಎಸ್. ಶಂಕರ್ ವಾದ ಮಂಡಿಸಿ, ಮೇಲ್ಮನವಿದಾರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದ್ದು, 2024ರ ಡಿಸೆಂಬರ್ 23ರಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. 68 ವರ್ಷದ ಮೇಲ್ಮನವಿದಾರ ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಎಫ್‌ಐಆರ್ ಪ್ರಕಾರ 2024ರ ಮೇ 1ರಿಂದ ಜೂನ್ 30ರ ನಡುವೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದ್ದು, 2024ರ ನವೆಂಬರ್ 9ರಂದು ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಅಪ್ರಾಪ್ತೆಯ ಗರ್ಭದಲ್ಲಿದ್ದ ಭ್ರೂಣದೊಂದಿಗೆ ಮೇಲ್ಮನವಿದಾರನ ಡಿಎನ್ಎ ಹೊಂದಾಣಿಕೆಯಾಗಿಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು.
ಸರ್ಕಾರದ ಪರ ವಕೀಲೆ ಪುಷ್ಪಲತಾ ಹಾಗೂ ಸಂತ್ರಸ್ತೆ ಪರ ವಕೀಲೆ ಮೈತ್ರೇಯಿ ಕೃಷ್ಣನ್ ಅವರು, ಸಂತ್ರಸ್ತೆಯು ಪರಿಶಿಷ್ಟ ಜಾತಿಗೆ ಸೇರಿದ್ದು, ಘಟನೆ ನಡೆದ ದಿನದಂದು ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು. 14 ವರ್ಷದ ಆಕೆಯನ್ನು ಅಂಗಡಿಯಲ್ಲಿ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿ ಐವರು ಆರೋಪಿಗಳು ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಮೊಮ್ಮಗಳ ವಯಸ್ಸಿನ ಬಾಲಕಿಯ ಮೇಲೆ 68 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿರುವುದು ಹೀನ ಕೃತ್ಯವಾಗಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)