ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ಸಂಗ್ರಹಿಸಿಡುವುದೂ ಅಪರಾಧ; ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- March 11, 2026
- 17 Views
ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಮೊಬೈಲ್ ಪೋನ್ನಲ್ಲಿ ಸಂಗ್ರಹಿಸಿಡುವುದೂ ಸಹ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಅಪರಾಧವಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮೊಬೈಲ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸಂಗ್ರಹಿಸಿದ್ದ ಆರೋಪದಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 15 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67(ಬಿ) ಅಡಿಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಪಿ.ಜೆ. ಬಿನೋಜ್ (38) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳು ಮೊಬೈಲ್ ಪೋನ್ನಲ್ಲಿ ಸಂಗ್ರಹಿಸಲಾಗಿದೆಯಷ್ಟೆ. ಆದರೆ, ಯಾರಿಗೂ ಅವುಗಳನ್ನು ಕಳುಹಿಸಿಲ್ಲ. ಆದ್ದರಿಂದ, ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿ ಅಪರಾಧಗಳು ತನಗೆ ಅನ್ವಯವಾಗುವುದಿಲ್ಲ ಎಂಬ ಅರ್ಜಿದಾರನ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ಮಕ್ಕಳ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಪ್ರಸರಣ ಮಾಡುವುದಷ್ಟೇ ಅಲ್ಲ; ಪ್ರಸಾರವಾಗುವ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳ ಅಶ್ಲೀಲ ಪೋಟೋ ಹಾಗೂ ವಿಡಿಯೊಗಳನ್ನು ಸಂಗ್ರಹಿಸಿಡುವುದೂ ಸಹ ಪೋಕ್ಸೊ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಅರ್ಜಿದಾರರು ತನ್ನ ಫೋನ್ನಿಂದ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊ ರವಾನಿಸಿಲ್ಲ ಎಂಬ ಕಾರಣಕ್ಕಾಗಿ ಆತ ಅಪರಾಧಕ್ಕೆ ಹೊಣೆಗಾರನಾಗಿರುವುದಿಲ್ಲ ಎಂದು ಅರ್ಥೈಸಲಾಗದು. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಈಗಾಗಲೇ ಅರ್ಜಿದಾರನ ವಿರುದ್ಧ ದೋಷಾರೋಪಗಳನ್ನು ಹೊರಡಿಸಿದೆ. ಪ್ರಕರಣವು ಸಾಕ್ಷ್ಯಧಾರಗಳ ವಿಚಾರಣಾ ಹಂತದಲ್ಲಿದೆ. ಆತ ಪೂರ್ಣಪ್ರಮಾಣದ ವಿಚಾರಣೆಯಿಂದಲೇ ದೋಷಮುಕ್ತವಾಗಿ ಬರಲಿ. ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಅಪರಾಧ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಅರ್ಜಿದಾರರ ಮೊಬೈಲ್ ಫೋನ್ ಅನ್ನು ತನಿಖೆಯ ವೇಳೆ ವಶಕ್ಕೆ ಪಡೆದಿದ್ದ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದ್ದರು. ಈ ವೇಳೆ, ಮೊಬೈಲ್ ಸ್ಟೋರೇಜ್ ಬಾಕ್ಸ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳು ಹೇರಳವಾಗಿರುವುದು ಪತ್ತೆಯಾಗಿತ್ತು.
ಇದರಿಂದ, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು, ಅರ್ಜಿದಾರನ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 67(ಬಿ) ಮತ್ತು ಪೋಕ್ಸೊ ಕಾಯ್ದೆ ಸೆಕ್ಷನ್ 15ರ ಅನ್ವಯ ಮಕ್ಕಳ ಅಶ್ಲೀಲ ಚಿತ್ರಗಳ ರಚನೆ, ಬ್ರೌಸಿಂಗ್, ಸಂಗ್ರಹಣೆ ಮತ್ತು ಪ್ರಸರಣ ಶಿಕ್ಷಾರ್ಹ ಅಪರಾಧ ಎಂಬ ಅಂಶಗಳ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅರ್ಜಿದಾರನ ವಿರುದ್ಧ ನಗರದ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್ಟಿಎಸ್ಸಿ-1) ದೊಷಾರೋಪ ಹೊರಿಸಿ ವಿಚಾರಣೆ ನಡೆಸುತ್ತಿತ್ತು. ಇದರಿಂದ, ತನ್ನ ವಿರುದ್ಧದ ಎಫ್ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ.
Related Articles
Thank you for your comment. It is awaiting moderation.


Comments (0)