ಗ್ರಾಹಕ ವೇದಿಕೆಗಳ ಅಧ್ಯಕ್ಷ, ಸದಸ್ಯರ ನೇಮಕಾತಿಗೆ ಸಮಿತಿ ರಚಿಸಿದ ಸರ್ಕಾರ: ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಖಾಲಿಯಿರುವ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಮತ್ತು ನೇಮಕಾತಿ ಸಂಬಂಧ ತ್ರಿಸದಸ್ಯ ಸಮಿತಿ ರಚನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವೂ ಸೇರಿ ಎಲ್ಲ ಜಿಲ್ಲಾ ಗ್ರಾಹಕ ವೇದಿಕೆಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿಯಾದ ತಕ್ಷಣ ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೈಸೂರಿನ ವಿಜಯನಗರದ ವಿ.ಆರ್.ರಘುನಾಥನ್ (72) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್,ರಾಜ್ಯದ ಎಲ್ಲ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗಳಲ್ಲಿ ಖಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಸಂಬಂಧಿಸಿದ ಮೇಲ್ವಿಚಾರಣೆಗಾಗಿ ಹೈಕೋರ್ಟ್ ನ್ಯಾಯಮೂರ್ತಿ ಅನು ಸಿವರಾಮನ್ ಅವರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿ ರಚನೆ ಮಾಡಲಾಗಿದೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ತಿಳಿಸಿ, ನ್ಯಾಯಪೀಠಕ್ಕೆ ಮೆಮೊ ಸಲ್ಲಿಸಿದರು.

ಅದನ್ನು ದಾಖಲಿಸಿಕೊಂಡ ಹೈಕೋರ್ಟ್, ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿದ್ದು, ಅರ್ಜಿದಾರರ ಮನವಿ ಪರಿಗಣಿಸಿದಂತಾಗಿದೆ. ಆದಷ್ಟೂ ಶೀಘ್ರವಾಗಿ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ, ಪಿಐಎಲ್ ಇತ್ಯರ್ಥಪಡಿಸಿತು.

Related Articles

Comments (0)

Leave a Comment