ಎಚ್‌ಡಿಕೆ ವಿರುದ್ಧದ ಸರ್ಕಾರಿ ಜಮೀನು ಒತ್ತುವರಿ ಆರೋಪ; ಎಸ್‌ಐಟಿ ರಚನೆಗೆ ತಡೆ ಪ್ರಶ್ನಿಸಿ ಸರ್ಕಾರದಿಂದ ಮೇಲ್ಮನವಿ

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತವರ ಸಂಬಂಧಿಗಳಿಂದ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿರುವ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಹೊರಡಿಸಲಾಗಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಕ್ರಮ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಹಿರಿಯ ಐಎಎಸ್‌ ಅಧಿಕಾರಿ ಅಮಲಾನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿ 2025ರ ಜನವರಿ 28ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಪತ್ನಿ ಕೆ.ಜಿ. ಪ್ರಮೀಳಾ, ಪುತ್ರ ಡಿ.ಟಿ. ಸಂತೋಷ್‌, ಸುನಂದಾ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಇ.ಎಸ್‌. ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ. ರೋಣ್‌, ಎಸ್‌ಐಟಿ ರಚನೆ ಆದೇಶಕ್ಕೆ ತಡೆ ನೀಡಿ ಈ ನ್ಯಾಯಾಲಯ ಜೂನ್‌ 19 ಹಾಗೂ ಜುಲೈ 2ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಆದ್ದರಿಂದ, ಹಾಲಿ ಅರ್ಜಿಗಳ ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು.

ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 8ಕ್ಕೆ ಮುಂದೂಡಿತು.

ಮಧ್ಯಂತರ ತಡೆ ನೀಡಿದ್ದ ನ್ಯಾಯಾಲಯ:
ಎಚ್.ಡಿ. ಕುಮಾರಸ್ವಾಮಿ ಅವರ ಅರ್ಜಿಯನ್ನು ಜೂನ್ 19ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿರುವ ಆದೇಶದ ನಂತರ ಔಪಚಾರಿಕವಾಗಿ ಯಾವುದೇ ರೀತಿಯ ಅಧಿಸೂಚನೆ ಪ್ರಕಟಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ, ಎಸ್‌ಐಟಿ ರಚಿಸಿರುವ ಆದೇಶ ಮತ್ತು ಆನಂತರ ಕುಮಾರಸ್ವಾಮಿ ಅವರಿಗೆ ಜಾರಿ ಮಾಡಿರುವ ಸಮನ್ಸ್‌ಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿತ್ತು. ಇದೇ ಆದೇಶ ತಮಗೂ ವಿಸ್ತರಿಸಬೇಕು ಎಂದು ಕೋರಿ ಪ್ರಮೀಳಾ, ಡಿ.ಟಿ. ಸಂತೋಷ್‌ ಹಾಗು ಸುನಂದಾ ಅವರ ಮನವಿಯನ್ನು ಜುಲೈ 2ರಂದು ನ್ಯಾಯಾಲಯ ಪುರಸ್ಕರಿಸಿತ್ತು.

Related Articles

Comments (0)

Leave a Comment