ಯಡಿಯೂರಪ್ಪ ವಿರುದ್ಧದ ಚಾರ್ಜ್‌ಶೀಟ್ ಪರಿಗಣಿಸಿರುವುದು ವಿವೇಚನಾರಹಿತ ಕ್ರಮ – ಸಿ.ವಿ. ನಾಗೇಶ್

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ’ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಆರೋಪ ಪಟ್ಟಿಯ ಸಂಜ್ಞೇ (ಕಾಗ್ನಿಜೆನ್ಸ್) ಪರಿಗಣಿಸಿ, ಸಮನ್ಸ್‌ ಜಾರಿಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ವಿವೇಚನಾರಹಿತವಾಗಿದೆ ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್‌ ಹೈಕೋರ್ಟ್‌ನಲ್ಲಿ ಬಲವಾಗಿ ಆಕ್ಷೇಪಿಸಿದರು.

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಪಡಿಸುವಂತೆ ಹಾಗೂ ಇದೇ ಪ್ರಕರಣದಲ್ಲಿ ಜಾಮೀನು ಮಂಜೂರು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ ನಾಗೇಶ್‌, ಪ್ರಕರಣದ ಆರೋಪಪಟ್ಟಿಯಲ್ಲಿ ವೈದ್ಯಕೀಯ ವರದಿ ಹಾಗೂ ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ಸಂತ್ರಸ್ತೆ, ದೂರುದಾರೆಯ ಹೇಳಿಕೆ ಲಗತ್ತಿಸಿಲ್ಲ. ಹೀಗಿದ್ದರೂ, ಮ್ಯಾಜಿಸ್ಟ್ರೇಟ್‌ ಅವರು ಆರೋಪ ಪಟ್ಟಿಯನ್ನು ಸಂಜ್ಞೇ ಪರಿಗಣಿಸಿದ್ದಾರೆ. ಯಡಿಯೂರಪ್ಪ ವಿರುದ್ದ ಸಂಜ್ಞೇ ಪರಿಗಣಿಸಿರುವ ಮತ್ತು ಅವರಿಗೆ ಸಮನ್ಸ್‌ ಜಾರಿ ಮಾಡಿರುವ ಆದೇಶವು ವಿವೇಚನಾರಹಿತವಾಗಿ ಹೊರಡಿಸಿರುವ ಯಾಂತ್ರಿಕ ಆದೇಶವಾಗಿದ್ದು ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

ಮಧ್ಯಂತರ ರಕ್ಷಣೆ ತೆರವಿಗೆ ಸರ್ಕಾರದ ಮನವಿ:
ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭೀಯೋಜಕ (ಎಸ್‌ಪಿಪಿ) ಪ್ರೊ.ರವಿವರ್ಮ ಕುಮಾರ್‌ ವಾದ ಮಂಡಿಸಿ, ಪ್ರಕರಣದ ಸಂಬಂಧ ಯಡಿಯೂರಪ್ಪ ವಿರುದ್ಧ ವಿಶೇಷ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವ ಅಗತ್ಯವಿತ್ತು. ಆದರೆ, ನಿರೀಕ್ಷಣಾ ಜಾಮೀನು ಕೋರಿ ಅವರು ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ಹೈಕೋರ್ಟ್‌ ಯಡಿಯೂರಪ್ಪ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ಸೂಚಿಸಿ ಮಧ್ಯಂತರ ಆದೇಶ ಮಾಡಿದೆ. ಈ ಮಧ್ಯಂತರ ರಕ್ಷಣೆಯನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿ.ವಿ.ನಾಗೇಶ್, ತನಿಖಾಧಿಕಾರಿಗಳು ನೀಡಿದ ಮೊದಲ ನೋಟಿಸ್‌ಗೆ ಅರ್ಜಿದಾರರು ತಮ್ಮ ವಕೀಲರ ಮೂಲಕ ಉತ್ತರಿಸಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದು ಆರೋಪಿಯ ಹಕ್ಕು. ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ ಪಡೆದು ವಿಚಾರಣೆಗೂ ಹಾಜರಾಗಿ, ತನಿಖೆಗೆ ಸಹಕರಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ದೂರುದಾರೆಯೇ ನಟೋರಿಯಸ್:
ಪ್ರಕರಣದಲ್ಲಿ ಆರೋಪಿಸಲಾಗಿರುವ ಘಟನೆ 2024ರ ಫೆಬ್ರವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ನಡೆದಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಮನೆಯಲ್ಲಿಯೇ ಘಟನೆ ನಡೆದಿದೆ ಎಂದು ಹೇಳಲಾಗಿದೆ. ದೂರುದಾರರು ಯಡಿಯೂರಪ್ಪ ಅವರ ಮನೆಗೆ ಬಂದಾಗ ಸ್ಥಳದಲ್ಲಿ 20-25 ಜನರಿದ್ದರು. ಅಷ್ಟು ಜನರ ಸಮ್ಮುಖದಲ್ಲಿ ಇಂತಹ ಕೃತ್ಯ ಎಸಗಲು ಸಾಧ್ಯವಿದೆಯೇ? ಮೇಲಾಗಿ ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ. ಈ‌ ಮಧ್ಯೆ ಹಲವು ಬಾರಿ ದೂರುದಾರರು ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ. ದೂರುದಾರೆ ನಟೋರಿಯಸ್ ಮಹಿಳೆ. ಆಕೆ 56 ದೂರು ದಾಖಲಿಸಿದ್ದಾರೆ. ಭೂಮಿಯ ಮೇಲಿರುವ ಎಲ್ಲರ ಮೇಲೂ ದೂರು ದಾಖಲಿಸಿದ್ದಾರೆ ಎಂದರು. ಇದಕ್ಕೆ ಎಸ್‌ಪಿಪಿ ಹಾಗೂ ದೂರುದಾರೆಯ ಪರ ವಕೀಲರು, ದೂರುದಾರೆ ನಿಧನರಾಗಿದ್ದಾರೆ. ಮೃತರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕತ್ತಲೆ ಕೋಣೆಯಲ್ಲಿ ಕಪ್ಪು ಬೆಕ್ಕು ಹುಡುಕಿದಂತೆ:
ವಾದ ಮುಂದುವರಿಸಿದ ಸಿ.ವಿ. ನಾಗೇಶ್‌, ದೂರುದಾರೆ ತನ್ನ ಪತಿ, ಪುತ್ರ, ಎಡಿಜಿಪಿ ಹಾಗೂ ಅವರದೇ ಪಕ್ಷದ ನಾಯಕ ಉಗ್ರಪ್ಪ ಮೇಲೂ ಕೇಸ್ ಹಾಕಿದ್ದಾರೆ. ಆಕೆಯ ದೂರನ್ನು ಸಂಪೂರ್ಣ ಸತ್ಯ ಎಂದು ನ್ಯಾಯಾಲಯ ಭಾವಿಸಬಾರದು. ಒಂದೂವರೆ ತಿಂಗಳ ನಂತರ ರಾಜಕಾರಣಿಯೊಬ್ಬರ ಮನೆಯಿಂದ ಬಂದು ದೂರು ದಾಖಲಿಸುತ್ತಾರೆ. ಆ ದೂರಿನ ತನಿಖೆ ಮುಗಿಸಿರುವ ಪೊಲೀಸರು, ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದು, ಕುರುಡನೊಬ್ಬ ಕತ್ತಲೆ ಕೋಣೆಯಲ್ಲಿ ಇಲ್ಲದ ಕಪ್ಪು ಬೆಕ್ಕು ಹುಡುಕಿದಂತಾಗಿದೆ. ಪೂರಕ ದಾಖಲೆ ಸಲ್ಲಿಸದಿದ್ದರೂ ವಿಶೇಷ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿರುವುದು ಕಾನೂನು ಬಾಹಿರ ಕ್ರಮ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿತು.

Related Articles

Comments (0)

Leave a Comment