ದತ್ತಾಂಶ ಸಂರಕ್ಷಣೆ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ; ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ
- by Jagan Ramesh
- October 13, 2025
- 82 Views

ಬೆಂಗಳೂರು: ರಾಜ್ಯದಲ್ಲಿ ನಡೆಸಲಾಗುತ್ತಿರುವ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುತ್ತಿರುವ ದತ್ತಾಂಶವನ್ನು ಹೇಗೆ ಸಂರಕ್ಷಣೆ ಮಾಡಲಾಗುತ್ತಿದೆ ಎಂಬ ಕುರಿತ ವಿಸ್ತೃತ ಪ್ರಮಾಣಪತ್ರವನ್ನು ನ್ಯಾಯಾಲಯದ ನಿರ್ದೇಶನದಂತೆ 24 ಗಂಟೆಯೊಳಗೆ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ರಾಜ್ಯದಲ್ಲಿ 2015ರಲ್ಲಿ ನಡೆಸಲಾಗಿದ್ದ ಸಾಮಾಜಿಕ, ಆರ್ಥಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಪ್ರಶ್ನಿಸಿ ಶಿವರಾಜ್ ಕಣಶೆಟ್ಟಿ ಮತ್ತಿತರರು ಹಾಗೂ ಸಮೀಕ್ಷೆ ವರದಿ ಜಾರಿಗೆ ಕೋರಿ ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ನಡೆಸಿತು.
ಅರ್ಜಿದಾರರಲ್ಲೊಬ್ಬರಾದ ಸಮಾಜ ಸಂಪರ್ಕ ವೇದಿಕೆ ಪರ ವಕೀಲ ಕೆ. ಅಭಿಷೇಕ್ ಅವರು, ಸರ್ಕಾರ ಹೊಸದಾಗಿ ಆರಂಭಿಸಿರುವ ಸಮೀಕ್ಷೆ ಮುಂದುವರಿಸಲು ಕಳೆದ ಸೆಪ್ಟೆಂಬರ್ 25ರಂದು ಅನುಮತಿಸಿದ್ದ ಹೈಕೋರ್ಟ್, ಸಮೀಕ್ಷೆಯಲ್ಲಿ ಸಂಗ್ರಹಿಸುವ ದತ್ತಾಂಶ ಸಂರಕ್ಷಣೆಯ ಕುರಿತು ವಿಸ್ತೃತ ಪ್ರಮಾಣಪತ್ರ ಸಲ್ಲಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶಿಸಿತ್ತು. ಆದರೆ, ಇದುವರೆಗೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿಲ್ಲ ಅಥವಾ ಅದರ ಪ್ರತಿಯನ್ನು ನಮಗೆ ಒದಗಿಸಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಮಾಣಪತ್ರ ಸಲ್ಲಿಸಲು ಆಯೋಗಕ್ಕೆ ಒಂದು ವಾರ ಕಾಲಾವಕಾಶ ನೀಡಲಾಗಿತ್ತಲ್ಲವೇ? ಪರಿಶೀಲನೆ ನಡೆಸಿ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ ಎಂದು ಹೇಳಿತು.
ಈ ನಡುವೆ, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಪ್ರಮಾಣಪತ್ರ ಸಲ್ಲಿಸಲು ಆಯೋಗಕ್ಕೆ ಹೈಕೋರ್ಟ್ ಒಂದು ದಿನ ಕಾಲಾವಕಾಶ ನೀಡಿತ್ತು. ಅದರಂತೆ ಕೋರ್ಟ್‌ಗೆ ಅದನ್ನು ಸಲ್ಲಿಸಲಾಗಿದ್ದು, ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಲಾಗುವುದು ಎಂದರು.
ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಹಾಲಿ ನಡೆಸಲಾಗುತ್ತಿರುವ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಾಲಯ ಡಿಸೆಂಬರ್ 5ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ. ಈ ಅರ್ಜಿಗಳನ್ನೂ ಅದೇ ದಿನ ವಿಚಾರಣೆಗೆ ನಿಗದಿಪಡಿಸಬಹುದು ಎಂದು ತಿಳಿಸಿದರು.
ಅರ್ಜಿ ಹಿಂಪಡೆಯಲು ಅನುಮತಿ:
ರಾಜ್ಯ ಸರ್ಕಾರ 2015ರಲ್ಲಿ ನಡೆಸಿದ್ದ ಸಮೀಕ್ಷೆ ಪ್ರಶ್ನಿಸಿ ಬೀದರ್‌ನ ಶಿವರಾಜ್ ಕಣಶೆಟ್ಟಿ, ನರಗುಂದದ ಚಂದ್ರಶೇಖರ ಸಾಂಬ್ರಾಣಿ, ಹುನಗುಂದದ ಬಸವರಾಜ ದಿಂಡೂರ ಮತ್ತು ಬೆಂಗಳೂರಿನ ಎಂ.ಎಸ್. ನಟರಾಜ್ ಸಲ್ಲಿಸಿರುವ ಪಿಐಎಲ್ ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009ರ ಸೆಕ್ಷನ್ 27ರ ಮತ್ತು ಅದರ ಅಡಿ 2010ರ ಅಡಿ ರೂಪಿಸಿರುವ ನಿಯಮಗಳ ಹೊರತಾಗಿ ಶಿಕ್ಷಕರನ್ನು ಬೇರಾವುದೇ ಕರ್ತವ್ಯಕ್ಕೆ ನಿಯೋಜಿಸದಂತೆ ಕೋರಿ ಬೆಂಗಳೂರಿನ ಭುಜೇಂದ್ರ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಹಿಂಪಡೆಯಲು ನ್ಯಾಯಾಲಯ ಅನುಮತಿಸಿತು.
ಉಳಿದ ಅರ್ಜಿಗಳು ಡಿ. 5ಕ್ಕೆ ನಿಗದಿ:
ಸಮೀಕ್ಷೆಯ ವರದಿ ಜಾರಿಗೆ ಕೋರಿ ಅತಿ ಹಿಂದುಳಿದ ಜಾತಿಗಳ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮತ್ತು ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ತಿಗಳ ಕ್ಷತ್ರಿಯಾ ಮಹಾಸಭಾದ ಅಧ್ಯಕ್ಷ ಎಚ್. ಸುಬ್ಬಣ್ಣ, ಕರ್ನಾಟಕ ಪ್ರದೇಶ ಕುರುಬ ಸಂಘದ ಕಾರ್ಯದರ್ಶಿ ಡಿ. ವೆಂಟಕೇಶ್ ಮೂರ್ತಿ, ರಾಜ್ಯ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಯಲ್ಲಪ್ಪ, ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಕೆ. ವೆಂಕಟ ಸುಬ್ಬಾರಾಜು ಮತ್ತಿತರರು ಸಲ್ಲಿಸಿರುವ ಅರ್ಜಿ ಹಾಗೂ ಸಮೀಕ್ಷೆಯನ್ನು ಆಕ್ಷೇಪಿಸಿ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ ಸೆಕ್ಷನ್ 9(i) ರದ್ದುಪಡಿಸುವಂತೆ ಕೋರಿ ಸಮಾಜ ಸಂಪರ್ಕ ವೇದಿಕೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ಡಿಸೆಂಬರ್ 5ಕ್ಕೆ ವಿಚಾರಣೆಗೆ ನಿಗದಿಪಡಿಸಿತು.
Related Articles
Thank you for your comment. It is awaiting moderation.
Comments (0)