ವೈದ್ಯೆಗೆ ಲೈಂಗಿಕ ಕಿರುಕುಳ ಆರೋಪ; ಕುಂದಾಪುರ ಆಡಳಿತ ವೈದ್ಯಾಧಿಕಾರಿ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಸಹೋದ್ಯೋಗಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯ ಘನತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ವೈದ್ಯರನ್ನು ಸುಮ್ಮನೆ ಬಿಡಲಾಗದು ಎಂದು ಕಟುವಾಗಿ ನುಡಿದಿದೆ.

ಮಹಿಳೆಯ ಘನತೆಗೆ ಧಕ್ಕೆಯುಂಟು ಮಾಡಿದ, ಲೈಂಗಿಕ ಕಿರುಕುಳ ನೀಡಿದ ಹಾಗೂ ಬೆದರಿಕೆಯೊಡ್ಡಿದ ಆರೋಪದಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಡಾ.ರಾಬರ್ಟ್‌ ರೆಬೆಲ್ಲೋ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.

ಮಧ್ಯರಾತ್ರಿ ಸಂದೇಶ/ಕರೆಗಳೇಕೆ?
ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ದಾಖಲೆಗಳನ್ನು ಗಮನಿಸಿದ ನ್ಯಾಯಪೀಠ, ದೂರುದಾರೆ ವೈದ್ಯೆಗೆ ಆರೋಪಿ ಮಧ್ಯರಾತ್ರಿ ಊಟಕ್ಕೆ ಕರೆದಿರುವುದು, ಅಶ್ಲೀಲ ಸಂದೇಶ ಕಳುಹಿಸಿರುವುದು ಮತ್ತು ಆಕೆಯ ಘನತೆಗೆ ಧಕ್ಕೆ ತರುವಂತಹ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕಂಡು, ಆರೋಪಿ ವೈದ್ಯನ ನಡೆಯನ್ನು ತೀವ್ರವಾಗಿ ಖಂಡಿಸಿತು.

ಆರೋಪಿ ಡಾ.ರಾಬರ್ಟ್‌ ಪರ ವಕೀಲರು, ಕರ್ತವ್ಯ ಸಮಯದ ನಂತರ ಹಾಗೂ ಮಧ್ಯರಾತ್ರಿ ವೇಳೆ ದೂರುದಾರೆಗೆ ಸಂದೇಶ ಕಳುಹಿಸಿದ ಹಾಗೂ ವಿಡಿಯೋ ಕಾಲ್‌ ಮಾಡಿ ಕಿರುಕುಳ ನೀಡಿದ ಆರೋಪ ಅರ್ಜಿದಾರರ ಮೇಲಿದೆ. ಆದರೆ, ಅವರು ಯಾವುದೇ ಅಪರಾಧ ಎಸಗಿಲ್ಲ ಎಂದರು. ಹಾಗಿದ್ದರೆ, ಮಧ್ಯರಾತ್ರಿ ಸಂದೇಶ ಕಳುಹಿಸಿರುವುದು, ಕರೆ ಮಾಡಿರುವುದೇಕೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಅದಕ್ಕುತ್ತರಿಸಿದ ಅರ್ಜಿದಾರ ಪರ ವಕೀಲರು, ದೂರುದಾರೆಗೆ ಯಾವುದೇ ಅಶ್ಲೀಲ ಅಥವಾ ಅಪರಾಧವೆನಿಸುವ ಸಂದೇಶಗಳನ್ನು ಅರ್ಜಿದಾರ ಕಳುಹಿಸಿಲ್ಲ ಎಂದರು. ಆಗ ನ್ಯಾಯಮೂರ್ತಿಗಳು, ಮತ್ತೇನು? ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಮಸೇಜ್‌ ಕಳುಹಿಸಿದ್ದರೇ ಎಂದು ಪ್ರಶ್ನಿಸಿದರು. ಅರ್ಜಿದಾರರ ಪರ ವಕೀಲರು, ಅದೂ ಸಹ ಇದೆ. ಕೆಲ ಚರ್ಚೆಯ ಸಂದೇಶ ಕಳುಹಿಸಲಾಗಿದೆ. ಅವು ಅಪರಾಧದ ಸಂದೇಶಗಳಲ್ಲ. ದೂರುದಾರೆ ಸಹ ಆರೋಪಿಯ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ ಎಂದರು.

ಅದನ್ನು ಕೇಳಿ ಮತ್ತಷ್ಟು ಕೋಪಗೊಂಡ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರ ಯಾವ ಸಂದೇಶ ಕಳುಹಿಸಿದ್ದಾರೆ ಎನ್ನುವುದನ್ನು ತೋರಿಸುವ ದಾಖಲೆಗಳು ಕೋರ್ಟ್‌ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಯನ್ನು ಏಕೆ‌ ಕರೆದಿದ್ದಾರೆ. ಸರ್ಕಾರಿ ನೌಕರನಾಗಿರುವ ಅರ್ಜಿದಾರ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಈ ರೀತಿ ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವೇ ಇಲ್ಲ. ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಎಲ್ಲ ವಿಷಯ ಬಯಲಾಗುತ್ತದೆ ಎಂದು ಹೇಳಿದರು.

ಅರ್ಜಿ ವಾಪಸ್:
ನ್ಯಾಯಾಲಯದ ಮುಂದಿರುವ ದಾಖಲೆಗಳಿಂದ ದೂರುದಾರೆ ವೈದ್ಯೆಗೆ ಅರ್ಜಿದಾರ ಕಿರುಕುಳ ನೀಡುವುದು ತಿಳಿಯಲಿದೆ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಲು ಸಾಧ್ಯವುಲ್ಲ. ಅರ್ಜಿಯನ್ನು ಮುಂದುವರಿಸಿದರೆ, ನ್ಯಾಯಾಲಯ ಕಠಿಣ ನಿಲುವು ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದ ಪೀಠ, ಪ್ರಕರಣ ಸಂಬಂಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಲಿ. ಆ ಬಳಿಕ ಆರೋಪ ಕೈಬಿಡಲು ಕೋರಿ ಆರೋಪಿ ವೈದ್ಯ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು. ಇದರಿಂದ, ಆರೋಪಿಯ ಪರ ವಕೀಲರು ಅರ್ಜಿ ಹಿಂಪಡೆದರು.

ಪ್ರಕರಣವೇನು?
ಸಹೋದ್ಯೋಗಿ ವೈದ್ಯೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆಕೆಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪ ಡಾ. ರಾಬರ್ಟ್ ರೆಬೆಲ್ಲೋ ಮೇಲಿದೆ. ತನ್ನೆಲ್ಲ ಕೋರಿಕೆಗಳನ್ನು ನಿರಾಕರಿಸಿದ್ದರಿಂದ ಹತಾಶೆಗೊಳಗಾದ ಆತ ಕಳೆದ ಏಪ್ರಿಲ್ 28ರಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮೇ 23ರಂದು ಹೆಸರಿಗೆ ಧಕ್ಕೆ ತರುವುದಾಗಿಯೂ, ಉದ್ಯೋಗದಿಂದ ತೆಗೆಯುವುದಾಗಿಯೂ ಬೆದರಿಕೆಯೊಡ್ಡಿದ್ದರೆಂದು ನೊಂದ ವೈದ್ಯೆ ಮೇ 30ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Related Articles

Comments (0)

Leave a Comment