ಆಜೀವ ಸೆರೆವಾಸ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಿಲ್ಲ; ಮಗು ಕೊಂದವನ ಶಿಕ್ಷೆಯನ್ನು ಜೀವಾವಧಿಗೆ ಮಾರ್ಪಡಿಸಿದ ಹೈಕೋರ್ಟ್
- by Legal Samachar Desk
- January 26, 2026
- 401 Views
ಬೆಂಗಳೂರು: ಆಜೀವ ಸೆರೆವಾಸದ ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳು (ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್) ಮಾತ್ರ ಹೊಂದಿದ್ದು, ಸೆಷನ್ಸ್ ಕೋರ್ಟ್ಗಳಿಗೆ ಆ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಮೂರೂವರೆ ವರ್ಷದ ಮಗುವನ್ನು ಹತ್ಯೆಗೈದ ಪ್ರಕರಣದಲ್ಲಿ ಅಪರಾಧಿಗೆ ವಿಧಿಸಲಾಗಿದ್ದ ಜೀವನಪರ್ಯಂತ ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದೆ.
ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ರುದ್ರೇಶ್ ಅಲಿಯಾಸ್ ರುದ್ರಯ್ಯ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಮರಣದಂಡನೆಗೆ ಪರ್ಯಾಯವಾಗಿ, ಯಾವುದೇ ಕ್ಷಮಾದಾನಕ್ಕೆ (Remission) ಅವಕಾಶವಿಲ್ಲದ ಆಜೀವ ಸೆರೆವಾಸದ ಶಿಕ್ಷೆ (ಸ್ವಾಭಾವಿಕವಾಗಿ ಮರಣ ಹೊಂದುವವರೆಗೆ) ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ಮಾತ್ರ ಇದೆ. ಈ ಅಧಿಕಾರ ಸೆಷನ್ಸ್ ನ್ಯಾಯಾಲಯಗಳಿಗೆ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಹಾಲಿ ಪ್ರಕರಣದಲ್ಲಿ ಮೇಲ್ಮನವಿದಾರನೇ ಮಗುವನ್ನು ಕೊಂದಿರುವುದು ಸಾಕ್ಷ್ಯಧಾರಗಳ ಸಹಿತ ಸಾಬೀತಾಗಿರುವ ಹಿನ್ನೆಯಲ್ಲಿ ಕೊಲೆ ಮತ್ತು ಅಪಹರಣ ಅಪರಾಧದಡಿ ಆತನನ್ನು ದೋಷಿ ಎಂದು ತೀರ್ಮಾನಿಸಿ 2017ರ ನವೆಂಬರ್ 27ರಂದು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಕಾಯಂಗೊಳಿಸಲಾಗಿದ್ದು, ಅಪರಾಧಿಗೆ ವಿಧಿಸಲಾಗಿದ್ದ ಆಜೀವ ಸೆರೆವಾಸದ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು?
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸಮನೆ ಗ್ರಾಮದ ನಿವಾಸಿಯಾದ ರುದ್ರೇಶ್ ಮೂಲೆಗದ್ದೆ ಮಠದಲ್ಲಿ ಕೆಲಸ ಮಾಡುತ್ತಿದ್ದ. ಅದೇ ಮಠದ ಅನುಯಾಯಿಯಾಗಿದ್ದ ಪ್ರಕರಣದ ದೂರುದಾರೆ (ಮೃತ ಮಗುವಿನ ತಾಯಿ) ಆಗಾಗ ಮಠಕ್ಕೆ ಭೇಟಿ ನೀಡುತ್ತಿದ್ದರಲ್ಲದೆ, ಮಠದ ವ್ಯವಹಾರಗಳಿಗೆ ಸಂಬಂಧಿಸಿದಂತೆ ರುದ್ರೇಶ್ಗೆ ದೂರುದಾರೆ ಮತ್ತು ಆಕೆಯ ತಾಯಿ ಸಲಹೆ ನೀಡುತ್ತಿದ್ದರು. ಇದೇ ವಿಚಾರವಾಗಿ ದೂರುದಾರೆ ಹಾಗೂ ರುದ್ರೇಶ್ ನಡುವೆ ವೈಷಮ್ಯ ಮೂಡಿತ್ತು.
ಮಠದ ನೂತನ ಸ್ವಾಮೀಜಿಯ ಪಟ್ಟಾಭಿಷೇಕ ಕಾರ್ಯಕ್ರಮದ ನಿಮಿತ್ತ 2017ರ ಏಪ್ರಿಲ್ 8ರಂದು ದೂರುದಾರೆ ತನ್ನ ಮೂರೂವರೆ ವರ್ಷದ ಗಂಡು ಮಗು ಹಾಗೂ ಕುಟುಂಬ ಸದಸ್ಯರೊಂದಿಗೆ ಮಠಕ್ಕೆ ತೆರಳಿದ್ದರು. ಏಪ್ರಿಲ್ 10ರ ರಾತ್ರಿ ಮಠದಲ್ಲೇ ಊಟ ಸೇವಿಸಿ, ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಗು ನಾಪತ್ತೆಯಾಗಿತ್ತು. ಆನಂತರ, ಮಗುವಿನ ಶವ ದೊರೆತಿತ್ತು. ಮಗುವಿನ ತಾಯಿ ರುದ್ರೇಶ್ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಹೊಸನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ರುದ್ರೇಶನೇ ಮಗುವನ್ನು ಅಪಹರಿಸಿ ಕೊಲೆ ಮಾಡಿದ್ದ ವಿಚಾರ ತಿಳಿದುಬಂದಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್, ಕೊಲೆ ಮತ್ತು ಅಪಹರಣ ಕೃತ್ಯದಲ್ಲಿ ರುದ್ರೇಶ್ನನ್ನು ದೋಷಿ ಎಂದು ತೀರ್ಮಾನಿಸಿ 2017ರಂದು ನವೆಂಬರ್ 27ರಂದು ತೀರ್ಪು ನೀಡಿತ್ತಲ್ಲದೆ, ನವೆಂಬರ್ 30ರಂದು ಅಪರಾಧಿಗೆ ಆಜೀವ ಸೆರೆವಾಸ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರುದ್ರೇಶ್ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.
ಅಪರಾಧಿಯ ವಾದವೇನು?
ರುದ್ರೇಶ್ ಪರ ವಾದ ಮಂಡಿಸಿದ್ದ ವಕೀಲ ಎಸ್. ಸುನೀಲ್ ಕುಮಾರ್, ಮೇಲ್ಮನವಿದಾರನ ವಿರುದ್ಧದ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆದರೂ, ಮೇಲ್ಮನವಿದಾರನನ್ನು ದೋಷಿ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿ ಲೋಪವೆಸಗಿದೆ ಎಂದು ಆಕ್ಷೇಪಿಸಿದ್ದರಲ್ಲದೆ, ಆಜೀವ ಸೆರೆವಾಸದ ಶಿಕ್ಷೆ ವಿಧಿಸುವ ಅಧಿಕಾರವ್ಯಾಪ್ತಿ ಸಾಂವಿಧಾನಿಕ ನ್ಯಾಯಾಲಯಗಳಾದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ಗಳಿಗೆ ಮಾತ್ರ ಇದ್ದು, ಸೆಷನ್ಸ್ ನ್ಯಾಯಾಲಯಗಳಿಗೆ ಆ ಅಧಿಕಾರವಿಲ್ಲ ಎಂದು ಕಿರಣ್ ಹಾಗೂ ಕರ್ನಾಟಕ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಹೀಗಿದ್ದರೂ, ಮೇಲ್ಮನವಿದಾರನಿಗೆ ವಿಚಾರಣಾ ನ್ಯಾಯಾಲಯ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದು ಸರಿಯಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಜ್ವಲ್ ರೇವಣ್ಣಗೂ ಆಗಿದೆ ಆಜೀವ ಶಿಕ್ಷೆ:
ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾದಾಗ ಕೆಲ ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆಯ ಆಧಾರದಲ್ಲಿ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಲು ಅವಕಾಶವಿರುತ್ತದೆ. 14 ವರ್ಷ ಜೈಲು ಶಿಕ್ಷೆ ಪೂರೈಸಿದ ನಂತರ ಕ್ಷಮಾದಾನಕ್ಕೂ ಅವಕಾಶವಿರಲಿದೆ. ಆದರೆ, ಆಜೀವ ಸೆರೆವಾಸದ ಶಿಕ್ಷೆಯಾದರೆ ಪರೋಲ್, ಕ್ಷಮಾದಾನ ಸೇರಿ ಯಾವುದೇ ವಿನಾಯಿತಿಗಳು ಕೈದಿಗೆ ದೊರೆಯುವುದಿಲ್ಲ.
ಇದೀಗ, ಅಪರಾಧಿಗೆ ಆಜೀವ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ನ್ಯಾಯಾಲಯಕ್ಕೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜೀವನಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ.
ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಆಜೀವ ಸೆರೆವಾಸದ ಶಿಕ್ಷೆ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಹ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರ ಪೀಠದ ಮುಂದೆ ಜನವರಿ 30ರಂದು ವಿಚಾರಣೆಗೆ ನಿಗದಿಯಾಗಿದೆ.
Related Articles
Thank you for your comment. It is awaiting moderation.


Comments (0)