ಸತೀಶ್ ಸೈಲ್‌ಗೆ ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ; ಕಮಾಂಡ್‌ ಆಸ್ಪತ್ರೆಯ ನಡೆಗೆ ಹೈಕೋರ್ಟ್‌ ಅಸಮಾಧಾನ

ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾದ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ತಪಾಸಣೆ ನಡೆಸಿ ಬೆಂಗಳೂರು ವೈದ್ಯಕೀಯ ಆಸ್ಪತ್ರೆ ನೀಡಿರುವ ಮೌಲ್ಯಮಾಪನಾ ವರದಿಯ ಮೆಮೊ ಕುರಿತಂತೆ ನಿಲುವು ಕೈಗೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೈಕೋರ್ಟ್ ನಿರ್ದೇಶಿಸಿದೆ.

ಇದೇ ವೇಳೆ, ಮೌಲ್ಯಮಾಪನಾ ವರದಿ ನೀಡುವಂತೆ ಮಾಡಲಾಗಿದ್ದ ಮನವಿ ಸಂಬಂಧ ವಾಯುಸೇನೆಯ ಕಮಾಂಡ್ ಆಸ್ಪತ್ರೆಯ ತೋರಿರುವ ಉದ್ಧಟತನವನ್ನು ನ್ಯಾಯಾಲಯ ತೀವ್ರವಾಗಿ ಖಂಡಿಸಿದೆ.

ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಜಾಮೀನುರಹಿತ ಬಂಧನ ವಾರಂಟ್‌ (ಎನ್‌ಬಿ‌ಡಬ್ಲ್ಯು) ಹೊರಡಿಸಿದ ಹಾಗೂ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಸತೀಶ್ ಸೈಲ್ ಅವರಿಗೆ ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆಸಲಾಗಿರುವ ಆರೋಗ್ಯ ಮೌಲ್ಯಮಾಪನೆ ವರದಿಯನ್ನೊಳಗೊಂಡ ಮೆಮೊ ಸಲ್ಲಿಸಲಾಗಿದೆ. ನವೆಂಬರ್ 13ರಂದು ದೊಮ್ಮಲೂರಿನ ವಾಯುಸೇನೆಯ ಕಮಾಂಡ್‌ ಆಸ್ಪತ್ರೆಯಲ್ಲಿ ಮೌಲ್ಯಮಾಪನಕ್ಕೆ ಒಳಗಾಗುವಂತೆ ಸೈಲ್‌ಗೆ ಸೂಚಿಸಲಾಗಿತ್ತು. ಸೈಲ್ ಪರ ವಕೀಲರು ವೈದ್ಯಕೀಯ ವರದಿ, ಮೆಮೊ ಜತೆ ಕಮಾಂಡ್‌ ಆಸ್ಪತ್ರೆಯ ಇ-ಮೇಲ್‌ ಪ್ರತಿ ಸಲ್ಲಿಸಿದ್ದು, ಕಮಾಂಡ್‌ ಆಸ್ಪತ್ರೆಯು ಸೈಲ್‌ ಆರೋಗ್ಯ ಮೌಲ್ಯಮಾಪನೆ ನಡೆಸಲು ನಿರಾಕರಿಸಿದೆ. ಸೂಕ್ತ ಸಿವಿಲ್‌ ಆಸ್ಪತ್ರೆ ಅಥವಾ ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಲು ಸೂಚಿಸಿದೆ. ಅರ್ಜಿದಾರರ ಮೆಮೊ ಸಂಬಂಧ ನಿಲುವು ಕೈಗೊಳ್ಳಲು ಇಡಿ ಕಾಲಾವಕಾಶ ಕೋರಿದೆ. ಅದಕ್ಕಾಗಿ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ. ಅರ್ಜಿದಾರರಿಗೆ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.

ಕಮಾಂಡ್‌ ಆಸ್ಪತ್ರೆ ನಡೆಗೆ ಕೋರ್ಟ್ ಅಸಮಾಧಾನ:
ವಿಚಾರಣೆ ವೇಳೆ, ಸೈಲ್‌ ಆರೋಗ್ಯ ತಪಾಸಣೆ ನಡೆಸಲು ನಿರಾಕರಿಸಿ ನ್ಯಾಯಾಲಯಕ್ಕೆ ಅಗೌರವ ಸೂಚಿಸುವ ರೀತಿಯಲ್ಲಿ ಇ-ಮೇಲ್‌ ಕಳುಹಿಸಿದ್ದ ಕಮಾಂಡ್‌ ಆಸ್ಪತ್ರೆಯ ನಡೆಗೆ ಹೈಕೋರ್ಟ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.

ಕಮಾಂಡ್‌ ಆಸ್ಪತ್ರೆ ಕಳುಹಿಸಿರುವ ಇಮೇಲ್‌ ಏನಿದು? ನ್ಯಾಯಾಲಯ ಮನವಿ ಮಾಡಿದಾಗ, ಉತ್ತರಿಸುವ ರೀತಿ ಇದೇ ಏನು? ಕಮಾಂಡ್‌ ಆಸ್ಪತ್ರೆಯು ಅಖಿಲ ಭಾರತ ಸಂಸ್ಥೆಯಾಗಿರಬಹುದು. ಆದರೆ, ಈ ರೀತಿ ನ್ಯಾಯಾಲಯವನ್ನು ಅಗೌರವಿಸಲಾಗದು. ಸೌಜನ್ಯವೆಂಬುದಿಲ್ಲ. ನ್ಯಾಯಾಲಯ ಮನವಿ ಮಾಡಿದಾಗ ಅದು ನಮಗೆ ಷರತ್ತಲ್ಲ (Mandate) ಎಂದು ಹೇಗೆ ಹೇಳಲಾಗುತ್ತದೆ? ಇದು ಉತ್ತರಿಸುವ ರೀತಿಯಲ್ಲ. ಪ್ರತಿಕ್ರಿಯೆ ನೀಡಲು ಬೇರೆ ದಾರಿಯಿದೆ ಎಂದು ನ್ಯಾಯಪೀಠ ಕಿಡಿಕಾರಿತು.

ಇಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್‌ ಅವರು, ಕಮಾಂಡ್‌ ಆಸ್ಪತ್ರೆಯಲ್ಲಿ ಜಠರ-ಕರುಳಿನ (Gastroenterology) ವಿಭಾಗ ಇರಲಿಲ್ಲ. ಅದು ಬೇರೆ ವಿಚಾರ. ಆದರೆ, ಇ-ಮೇಲ್‌ ಕಳುಹಿಸುವ ಮುನ್ನ ಕಮಾಂಡ್‌ ಆಸ್ಪತ್ರೆ ನಮ್ಮನ್ನು ಸಂಪರ್ಕಿಸಬೇಕಿತ್ತು. ನ್ಯಾಯಾಲಯದೊಡನೆ ಈ ರೀತಿ ನಡೆದುಕೊಳ್ಳಬಾರದು. ಅಧಿಕಾರಿಗಳಿಗೆ ಈ ಬಗ್ಗೆ ಸಲಹೆ ನೀಡಲಾಗುವುದು ಎಂದರು.

ಯಕೃತ್ ಕಸಿಗೆ ಶಿಫಾರಸು:
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಕಮಾಂಡ್‌ ಆಸ್ಪತ್ರೆಯು ಸೈಲ್‌ ಅವರನ್ನು ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಲು ಸೂಚಿಸಿದೆ. ಕಮಾಂಡ್ ಆಸ್ಪತ್ರೆಯಲ್ಲಿ ವಾಯುಸೇನೆ ಸಿಬ್ಬಂದಿ ಹೊರತುಪಡಿಸಿ ಇತರರಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಜಠರ-ಕರಳು ವಿಭಾಗ ಇದ್ದು, ಅಲ್ಲಿ ತಪಾಸಣೆ ನಡೆಸಿಕೊಳ್ಳಿ ಎಂದು ಹೇಳಿದೆ. ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ವರದಿಯಲ್ಲಿ ಸೈಲ್‌ ಅವರಿಗೆ ಯಕೃತ್‌ ಕಸಿ (Liver Transplant) ಅಗತ್ಯವಿದೆ ಎಂದು ಹೇಳಲಾಗಿದೆ ಎಂದರು.

ಇಡಿ ಪರ ವಕೀಲರು, ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ ಹೋಗುವಂತೆ ಸೈಲ್‌ಗೆ ಕಮಾಂಡ್‌ ಆಸ್ಪತ್ರೆ ಸೂಚಿಸಿಲ್ಲ. ಅವರು ಮನವಿ ಮಾಡಿದ್ದಾರೆ. ಈಗಾಗಲೇ ಸೈಲ್‌ ಇಎಸ್‌ಐಗೆ ಹೋಗಿದ್ದಾರೆ. ಮತ್ತೊಮ್ಮೆ ಅಲ್ಲಿಗೆ ಅವರನ್ನು ಕಳುಹಿಸುವುದು ಸೂಕ್ತ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಚೌಟ, ಈಗಾಗಲೇ ಎರಡು ಬಾರಿ ಸೈಲ್‌ ಅವರನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಇಡಿ ತಪಾಸಣೆಗೆ ಒಳಪಡಿಸಿದೆ. ಅಲ್ಲದೇ, ಇಎಸ್‌ಐ ಆಸ್ಪತ್ರೆಯಲ್ಲಿ ಜಠರ-ಕರುಳಿನ ವಿಭಾಗ ಇಲ್ಲ ಎನ್ನಲಾಗಿದೆ ಎಂದು ತಿಳಿಸಿದರು.

ಅಂತಿಮವಾಗಿ ನ್ಯಾಯಪೀಠ, ಜಾರಿ ನಿರ್ದೇಶನಾಲಯ ಮತ್ತೊಂದು ಅಭಿಪ್ರಾಯ ಪಡೆಯುವುದಾದರೆ ಪಡೆಯಲಿ. ಆನಂತರ ಏನಾಗುತ್ತದೆ ಅದು ಮಾಡೋಣ ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment