ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ; ಅನುಮತಿ ಕುರಿತು ನ.13ರಂದು ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Jagan Ramesh
- November 7, 2025
- 609 Views
ಬೆಂಗಳೂರು/ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವ ಸಂಬಂಧ ನವೆಂಬರ್ 13ರ ಮಧ್ಯಾಹ್ನ 2.30ಕ್ಕೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಕಲಬುರಗಿ) ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ನ್ಯಾಯಾಲಯದ ಸಲಹೆಯಂತೆ ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗಿಯಾಗಿದ್ದು, ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರದ ನಿರ್ಧಾರ ತಿಳಿಸಬೇಕಿದೆ ಎಂದರು.
ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಒಂದು ವಾರದೊಳಗೆ ಮನವಿ ಸಲ್ಲಿಸಿರುವ ಎಲ್ಲ ಸಂಘಟನೆಗಳಿಗೂ ಅನುಮತಿ ನೀಡಲಾಗುವುದು. ಯಾವ ದಿನ ಅವರಿಗೆ ಅವಕಾಶ ನೀಡಲಾಗುವುದು ಎಂಬುದನ್ನು ಲಿಖಿತವಾಗಿ ತಿಳಿಸಲಾಗುವುದು. ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರುಣ್ ಶ್ಯಾಮ್, ನವೆಂಬರ್ 13 ಅಥವಾ 16ರಂದು ಪಥಸಂಚಲನ ನಡೆಸಲು ಅನುಮತಿಸಿದರೆ ಅನುಕೂಲವಾಗುತ್ತದೆ. ಸಭೆ ನಡೆಸಲು ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದ್ದು, ನಾವು ಕೇಳಿರುವ ಎರಡು ದಿನಗಳಂದು ಮಾತ್ರ ಮಂಟಪ ಬಳಕೆಗೆ ಲಭ್ಯವಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನವೆಂಬರ್ 5ರಂದು ಎಲ್ಲ ಸಂಘಟನೆಗಳ ಜತೆ ನಡೆಸಿರುವ ಶಾಂತಿ ಸಭೆಯು ಫಲಪ್ರದವಾಗಿದ್ದು, ಅರ್ಜಿದಾರ ಅಶೋಕ್ ಪಾಟೀಲ್ ಅವರು ನವೆಂಬರ್ 13 ಅಥವಾ 16ರಂದು ಪಥಸಂಚಲನಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಅನುಮತಿ ಕೋರಿರುವ ಎಲ್ಲ ಸಂಘಟನೆಗಳಿಗೂ ಒಂದು ಬಾರಿಯ ಕ್ರಮವಾಗಿ ಅನುಮತಿ ಕಲ್ಪಿಸಲಾಗುವುದು ಎಂದು ಎಜಿ ಭರವಸೆ ನೀಡಿದ್ದಾರೆ. ಆದ್ದರಿಂದ, ನವೆಂಬರ್ 13ರಂದು 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗುವುದು. ಅದೇ ದಿನ ಸರ್ಕಾರ ಅರ್ಜಿದಾರರಿಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ನಿಲುವು ತಿಳಿಸಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)