ರೋಡ್ ರೇಜ್; ಟೆಕಿ ವಿರುದ್ಧದ ಕೊಲೆ ಯತ್ನ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- April 6, 2026
- 8 Views
ಬೆಂಗಳೂರು: ರೋಡ್ ರೇಜ್‌ಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೊಲೆ ಯತ್ನ ಪ್ರಕರಣ ರದ್ದು ಕೋರಿ ಬೆಂಗಳೂರಿನ ಕೊಡಿಗೆಹಳ್ಳಿಯ ಸುಕೃತ್ ಕೇಶವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿತು. ಇದೇ ವೇಳೆ, ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಅದನ್ನು ಪ್ರಶ್ನಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಿ, ಅರ್ಜಿ ಇತ್ಯರ್ಥಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಚ್.ಎಂ. ಗೋಪಾಲ್ ವಾದ ಮಂಡಿಸಿ, ಇದು ರೋಡ್ ರೇಜ್ ಅಪಘಾತ. ಯಾವುದೇ ಹೇಳಿಕೆ ಇಲ್ಲದೇ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರಿಗೆ ಯಾವುದೇ ದುರುದ್ದೇಶವಿರಲಿಲ್ಲ ಎಂದರು.
ಆಗ ನ್ಯಾಯಪೀಠ, ಮೊದಲು ಬಿಎನ್‌ಎಸ್ ಸೆಕ್ಷನ್ 109 (ಕೊಲೆ ಯತ್ನ) ಇರಲಿಲ್ಲ. ಆಮೇಲೆ ಅನುಮತಿ ಪಡೆದು ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಬನ್ನಿ, ರೋಡ್ ರೇಜ್ ಪ್ರಕರಣದಲ್ಲಿ ದುರುದ್ದೇಶವೇನು ನೋಡಬೇಕು ಎಂದು ಹೇಳಿತು.
ಬೆಂಗಳೂರು ಟ್ರಾಫಿಕ್ ತಾಳ್ಮೆ ಕಲಿಸುತ್ತದೆ:
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅರ್ಜಿದಾರರು ಸಾಫ್ಟ್ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡಲು ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಆ ತಾಳ್ಮೆ ಇರಬೇಕು. ರೋಡ್ ರೇಜ್‌ಗೆ ಕ್ಷಮೆಯೇ ಇಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ನುಡಿಯಿತು.
ಪ್ರಕರಣವೇನು?
ಅಂಕಿತಾ ಪಾಟೀಲ್ ಹಾಗೂ ವಿನೇಶ್ ದಂಪತಿ 2025ರ ಅಕ್ಟೋಬರ್ 26ರಂದುಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಪುತ್ರ ಕಲ್ಪ ಜೈನ್‌ನನ್ನು ಕೂರಿಸಿಕೊಂಡು ತಿಂಡ್ಲುವಿನಿಂದ ಇಂದಿರಾನಗರಕ್ಕೆ ಹೊರಟಿದ್ದರು. ಎಂ.ಎಸ್. ರಾಮಯ್ಯ ಆಸ್ಪತ್ರೆಯ ಸಿಗ್ನಲ್ ಬಳಿ ಹಿಂದಿನಿಂದ ಕೆಂಪು ಬಣ್ಣದ ಟಾಟಾ ಕರ್ವ್‌ನಲ್ಲಿ ಬಂದ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ. ಇದರಿಂದ, ಸ್ಕೂಟರ್‌ನಲ್ಲಿದ್ದವರೆಲ್ಲರೂ ಕೆಳಗೆ ಬಿದ್ದು ಚಾಲಕ ವಿನೇಶ್‌ಗೆ ಎಡಭಾಗದ ಪಕ್ಕೆಗೆ ಪೆಟ್ಟಾಗಿತ್ತು.
ಈ ಸಂಬಂಧ ಸದಾಶಿವನಗರ ಸಂಚಾರ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 281, 125(ಎ) ಮತ್ತು ಮೋಟಾರು ವಾಹನ ಕಾಯ್ದೆ ಸೆಕ್ಷನ್‌ಗಳಾದ 134 (ಎ ಮತ್ತು ಬಿ) ಮತ್ತು 187ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯವು ಸದಾಶಿವನಗರ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಕ್ಷಮ ನ್ಯಾಯಾಲಯ ಮತ್ತು ಅಧಿಕಾರಿಗಳ ಅನುಮತಿ ಪಡೆದು ಪ್ರಕರಣವನ್ನು ಸದಾಶಿವನಗರ ಸಂಚಾರ ಠಾಣೆಯ ಪೊಲೀಸರು ಸದಾಶಿವನಗರ ಠಾಣೆಗೆ ಪ್ರಕರಣಗೆ ವರ್ಗಾಯಿಸಿದ್ದರು.
ಇದನ್ನು ಆಧರಿಸಿ ಸದಾಶಿವನಗರ ಠಾಣೆಯ ಪೊಲೀಸರು ಬಿಎನ್‌ಎಸ್ ಸೆಕ್ಷನ್ 109(1) ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.



Comments (0)