ಶಿರೂರು ಭೂಕುಸಿತದ ರಕ್ಷಣಾ ಕಾರ್ಯ ಸದ್ಯಕ್ಕೆ ಸ್ಥಗಿತ; ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ
- by Jagan Ramesh
- August 21, 2024
- 93 Views
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತದಲ್ಲಿ ಕಾಣೆಯಾಗಿರುವ ಮೂವರು ಇನ್ನೂ ಪತ್ತೆಯಾಗಬೇಕಿದ್ದು, ಸದ್ಯ ನೀರಿನ ಹರಿವು ಅಪಾಯಮಟ್ಟದಲ್ಲಿರುವ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.
ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವವರ ರಕ್ಷಣೆ ಹಾಗೂ ಪತ್ತೆಗೆ ಕ್ರಮ ಜರುಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲ ಸಿಜಿ ಮಲೈಯಿಲ್ ಹಾಗೂ ದೆಹಲಿಯ ವಕೀಲ ಕೆ.ಆರ್. ಸುಭಾಷ್ ಚಂದ್ರನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಘಟನೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಸದ್ಯ ನದಿಯಲ್ಲಿ ನೀರಿನ ಹರಿವು ಅಪಾಯ ಮಟ್ಟದಲ್ಲಿರುವ ಕಾರಣ ಆಗಸ್ಟ್ 16ರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರ್ಜಿದಾರರ ಪರ ವಕೀಲರು, ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸ್ಥಳೀಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈಗ ಮೃತದೇಹಗಳನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಅವರ ಸಹಕಾರವನ್ನು ಸರ್ಕಾರ ನಿರಾಕರಿಸುತ್ತಿದೆ. ಸ್ಥಳಕ್ಕೆ ತೆರಳಿದರೆ ಕಾನೂನು ಕ್ರಮ ಜರುಗಿಸುವುದಾಗಿ ಈಶ್ವರ್ ಮಲ್ಪೆ ಅವರನ್ನು ಹೆದರಿಸಲಾಗುತ್ತಿದೆ. ಮೃತದೇಹಗಳು ಸಿಕ್ಕರೆ ಅಂತಿಮ ವಿಧಿ ವಿಧಾನವನ್ನಾದರೂ ನೆರವೇರಿಸಲು ಕುಟುಂಬದವರಿಗೆ ಸಾಧ್ಯವಾಗುತ್ತದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಎಜಿ, ಘಟನೆಯಲ್ಲಿ ನಾಪತ್ತೆಯಾಗಿದ್ದ 11 ಜನರಲ್ಲಿ 8 ಜನರ ಶವಗಳು ದೊರೆತಿದ್ದು, 3 ಮಂದಿ ಈವರೆಗೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಎಸ್‌ಡಿಆರ್‌ಎಫ್‌ನ 42, ಎನ್‌ಡಿಆರ್‌ಎಫ್‌ನ 31 ಸಿಬ್ಬಂದಿ, ಸೇನೆಯ 60, ನೌಕಾಪಡೆಯ 12, ಅಗ್ನಿಶಾಮಕದಳದ 26 ಸಿಬ್ಬಂದಿ ಹಾಗೂ ಕರಾವಳಿ ಕಾವಲು ಪಡೆಯ ಇಬ್ಬರು ಸೇರಿ ಒಟ್ಟು 171 ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಇಷ್ಟೆಲ್ಲ ಜನರ ಶ್ರಮದ ಹೊರತಾಗಿಯೂ, ಅರ್ಜಿದಾರರು ಕೇವಲ ಒಬ್ಬ ವ್ಯಕ್ತಿಯ ವಿಚಾರ ಮುಂದಿಟ್ಟುಕೊಂಡು ದೂರುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಯಾರ ಜೀವವನ್ನೂ ಅಪಾಯಕ್ಕೆ ದೂಡಲಾಗದು:
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ ಕಾಮತ್ ವಾದ ಮಂಡಿಸಿ, ಆಗಸ್ಟ್ ತಿಂಗಳಿನಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಪ್ರವಾಹವು 7 ನಾಟ್‌ಗಿಂತಲೂ ಅಧಿಕವಾಗಿದೆ. ಇದು ಅಪಾಯದ ಮಟ್ಟವಾಗಿದ್ದು, ರಕ್ಷಣೆಗೆ ತೆರಳುವ ಮುಳುಗು ತಜ್ಞರ ಜೀವದ ಬಗ್ಗೆಯೂ ನಮಗೆ ಕಾಳಜಿ ಇದೆ. ನೀರಿನ ಹರಿವು ಅಪಾಯದ ಮಟ್ಟದಲ್ಲಿರುವ ಸಂದರ್ಭದಲ್ಲಿ ಮುಳುಗು ತಜ್ಞರನ್ನು ನೀರಿಗೆ ಇಳಿಸಲಾಗದು. ಅವರ ಪ್ರಾಣವನ್ನು ಅಪಾಯಕ್ಕೆ ದೂಡಲು ನಾವು ಸಿದ್ಧರಿಲ್ಲ ಎಂದರು.
ಇದಕ್ಕೆ ದನಿಗೂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಮನುಷ್ಯ ಸಾಧ್ಯ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಕಾಣೆಯಾಗಿರುವ 3 ಜನರ ರಕ್ಷಣೆಗಾಗಿ 171 ಜನರನ್ನು ನಿಯೋಜಿಸಲಾಗಿತ್ತು. ಅವರೆಲ್ಲರೂ ಹಗಲಿರುಳೆನ್ನದೆ ಸತತವಾಗಿ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆದರೆ, ಸದ್ಯ ನೀರಿನ ರಭಸ ಹೆಚ್ಚಿರುವ ಕಾರಣ, ಅಲ್ಲಿಗೆ ತೆರಳುವವರ ಜೀವಕ್ಕೂ ಅಪಾಯವಾಗಲಿದೆ. ಈ ಕಾರಣದಿಂದ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದನ್ನು ದಾಖಲಿಸಿಕೊಂಡ ಪೀಠ, ರಕ್ಷಣಾ ಕಾರ್ಯಾಚರಣೆಯ ನಿಟ್ಟಿನಲ್ಲಿ ಸರ್ಕಾರಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತಲ್ಲದೆ, ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿಗೆ ಅರ್ಜಿದಾರರು ಉತ್ತರಿಸಬೇಕು ಹಾಗೂ ಘಟನೆಯಲ್ಲಿ ಮೃತಪಟ್ಟವರು ಹಾಗೂ ಸಂತ್ರಸ್ತರಿಗೆ ಕಲ್ಪಿಸಲಾಗಿರುವ ಪುನರ್ವಸತಿಯ ಬಗ್ಗೆ ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ಒದಗಿಸಬೇಕೆಂದು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟಂಬರ್ 18ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)