ಚಾರ್ಜ್ಶೀಟ್ ಮಾಹಿತಿ ಪ್ರಸಾರಕ್ಕೆ ನಿರ್ಬಂಧ ಕೋರಿ ದರ್ಶನ್ ಅರ್ಜಿ; ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್
- by Jagan Ramesh
- September 9, 2024
- 156 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿ ಹಾಗೂ ಇತರ ಪೂರಕ ಅಂಶಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಲು ನಿರ್ದೇಶಿಸುವಂತೆ ಕೋರಿ ನಟ ದರ್ಶನ್ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಶ್ರೀನಿವಾಸ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಅರ್ಜಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳನ್ನು ಹೆಸರಿಸಿ ಮಂಗಳವಾರ (ಸೆಪ್ಟೆಂಬರ್ 10) ಬೆಳಗ್ಗೆ 10.30ಕ್ಕೆ ಮೆಮೊ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ಸುದ್ದಿ ಮಾಧ್ಯಮಗಳು, ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ದಿನಪೂರ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ಪೂರ್ವಾಗ್ರಹ ಪೀಡಿತ ಭಾವನೆಯಿಂದ ಪ್ರಸಾರ ಮಾಡುತ್ತಿವೆ. ಇದು ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ ನಿಯಂತ್ರಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ, ದರ್ಶನ್ ಅವರ ಮೂಲಭೂತ ಹಕ್ಕುಗಳಿಗೂ ಧಕ್ಕೆಯಾಗಲಿದೆ. ಆದ್ದರಿಂದ, ಮಾಧ್ಯಮಗಳನ್ನು ಈ ವಿಷಯದಲ್ಲಿ ನಿಯಂತ್ರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶಿಸಬೇಕೆಂದು ಕೋರಿದರು.
ಈ ಮನವಿ ಪುರಸ್ಕರಿಸಿ ಪೂರಕ ಆದೇಶ ಬರೆಸಲು ಪೀಠ ಮುಂದಾಗುತ್ತಿದ್ದಂತೆಯೇ, ಅರ್ಜಿದಾರರ ಮನವಿಯನ್ನು ಬಲವಾಗಿ ವಿರೋಧಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ ಕಾಮತ್, ಭಾರತದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿವೆ. ಇವುಗಳಲ್ಲಿ ನಾವು ಯಾರನ್ನು ನಿಯಂತ್ರಿಸಬೇಕು. ಅಷ್ಟಕ್ಕೂ, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅರ್ಜಿದಾರರು ಹೀಗೆ ಆದೇಶ ಪಡೆಯಲಾಗದು. ಒಂದು ವೇಳೆ, ನಿರ್ದಿಷ್ಟ ಮಾಧ್ಯಮ ಅಥವಾ ಸುದ್ದಿ ವಾಹಿನಿ ವಿರುದ್ಧ ದೂರು ನೀಡಿದರೆ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಆಗ ನ್ಯಾಯಪೀಠ, ನೀವೇ ಸ್ವಯಂಪ್ರೇರಿತವಾಗಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕಾಮತ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್, ಆ ರೀತಿ ಅನಿರ್ದಿಷ್ಟ ವಿಧಾನದಲ್ಲಿ ಕ್ರಮ ಕೈಗೊಳ್ಳಲಾಗುವುದಿಲ್ಲ. ಅರ್ಜಿದಾರರು ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳನ್ನು ಹೆಸರಿಸಿ ಅವುಗಳ ವಿರುದ್ಧ ದೂರು ನೀಡಿದರೆ ಅಂಥವರ ವಿರುದ್ಧ ಸಚಿವಾಲಯ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಪುನರುಚ್ಚರಿಸಿದರು.
ಇದನ್ನು ಪರಿಗಣಿಸಿದ ಪೀಠ, ಆಕ್ಷೇಪಣೆ ಇರುವ ನಿರ್ದಿಷ್ಟ ಮಾಧ್ಯಮಗಳ ಕುರಿತು ಮಂಗಳವಾರ ಬೆಳಗ್ಗೆ ಮೆಮೊ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.
ದರ್ಶನ್ ಮನವಿ ಏನು?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಗಳು ಹಾಗೂ ತನಿಖೆಯ ಸಮಯದಲ್ಲಿ ಸಂಗ್ರಹಿಸಲಾಗಿರುವ ಇತರ ದಾಖಲೆಗಳ ಕುರಿತು ಪ್ರಕಟಣೆ ಹಾಗೂ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಿ ಸೂಕ್ತ ಆದೇಶ ಹೊರಡಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಜತೆಗೆ, ತನಿಖೆ ಪೂರ್ಣಗೊಳ್ಳುವವರೆಗೆ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಸಂಬಂಧ 2021ರ ಆಗಸ್ಟ್ 11ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಡಿಜಿ-ಐಜಿಪಿಗೆ ನಿರ್ದೇಶಿಸಬೇಕು. ಜತೆಗೆ, ಮಾಧ್ಯಮ ಸಂಸ್ಥೆಗಳು/ಸುದ್ದಿ ವಾಹಿನಿಗಳು ಅನಧಿಕೃತ ಮಾರ್ಗಗಳ ಮೂಲಕ ಸಂಗ್ರಹಿಸಿರುವ ಫೋಟೋಗಳು, ತಪ್ಪೊಪ್ಪಿಗೆ ಹೇಳಿಕೆಗಳು, ಡಿಜಿಟಲ್ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಬೇಕು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.
Comments (0)