ನೇಮಕಾತಿ ಹಗರಣಗಳ ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯೂ ಸೇರಿ ಹಲವು ನೇಮಕಾತಿ ಹಗರಣಗಳ ಕಿಂಗ್‌ಪಿನ್ ಎನ್ನಲಾದ ಆರ್‌.ಡಿ. ಪಾಟೀಲ್‌‌ ಅಲಿಯಾಸ್ ರುದ್ರಗೌಡ ಪಾಟೀಲ್‌ಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೊಕಾ) ಅಡಿ 2023ರಲ್ಲಿ ಬಂಧನಕ್ಕೊಳಗಾಗಿ ಸದ್ಯ ಮೈಸೂರು ಕಾರಾಗೃಹದಲ್ಲಿರುವ ರುದ್ರಗೌಡ ಪಾಟೀಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಲಬುರಗಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ರಾಜೇಶ್‌ ರೈ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಅರ್ಜಿದಾರರು ಮೇಲ್ನೋಟಕ್ಕೆ ಹಲವು ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಅವರಿಗೆ ಅಪರಾಧವೆಸಗುವುದೇ ಅಭ್ಯಾಸವಾಗಿದ್ದು (Habitual Offender), ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

ಹೈಕೋರ್ಟ್ ಆದೇಶವೇನು?
ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮವೆಸಗುವ ಕ್ರಿಮಿನಲ್‌ ಪಿತೂರಿಗಳಲ್ಲಿ ಪಾಟೀಲ್‌ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಸಲ್ಲಿಸಿದೆ. ತನಿಖಾಧಿಕಾರಿಗಳು ಪಾಟೀಲ್‌ ಖರೀದಿಸಿದ ಮೊಬೈಲ್‌ ಫೋನ್‌ಗಳು ಮತ್ತು ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ವಂಚನೆಯಲ್ಲಿ ಅವರ ಪಾತ್ರ ತೋರಿಸುವ ಕರೆ ವಿವರ ದಾಖಲೆಗಳನ್ನು ಸಲ್ಲಿಸಿದ್ದಾರೆ. ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಪರೀಕ್ಷೆಗಳ ಸಂಬಂಧ 8 ಪ್ರಕರಣಗಳು ಹಾಗೂ 2021ರ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸೇರಿ ಪರೀಕ್ಷಾ ದುಷ್ಕೃತ್ಯಕ್ಕಾಗಿ ಅರ್ಜಿದಾರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಾದ-ಪ್ರತಿವಾದ:
ವಿಚಾರಣೆ ವೇಳೆ ವಾದ ಮಂಡಿಸಿದ್ದ ಪಾಟೀಲ್ ಪರ ವಕೀಲರು, ಪ್ರಕರಣದ ತನಿಖೆ ಪೂರ್ಣಗೊಂಡಿದೆ. ಎಲ್ಲ ಆರೋಪಿಗಳೂ ಜಾಮೀನು ಪಡೆದು ಹೊರಬಂದಿದ್ದಾರೆ. ಪಾಟೀಲ್‌ ಈಗಾಗಲೇ ಎರಡು ವರ್ಷಕ್ಕೂ ಅಧಿಕ ಸಮಯದಿಂದ ಸೆರೆವಾಸದಲ್ಲಿದ್ದಾರೆ. ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವ ಅವಕಶ್ಯಕತೆ ಇಲ್ಲ. ಆದ್ದರಿಂದ, ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.

ಜಾಮೀನು ಅರ್ಜಿಯನ್ನು ಬಲವಾಗಿ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲ ಎಂ. ಸುದರ್ಶನ್‌, ಆರೋಪಿಯು ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ 25ಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ 2021ರಲ್ಲಿ ನಡೆದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣವೂ ಸೇರಿದೆ. ಆದ್ದರಿಂದ, ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರಲ್ಲದೆ, ಕಳೆದ ವರ್ಷ 3 ವಾರಗಳ ಮಧ್ಯಂತರ ಜಾಮೀನು ಪಡೆದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಜೈಲು ಅಧಿಕಾರಿಗಳೊಂದಿಗೆ ಪಾಟೀಲ್ ಜಗಳವಾಡಿದ್ದರು. ಇದರಿಂದ, ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಪ್ರಕರಣವೇನು?
ಹಣಕಾಸು ಗುಪ್ತಚರ ಘಟಕದ ಪೊಲೀಸ್‌ ವರಿಷ್ಠಾಧಿಕಾರಿ ರಾಘವೇಂದ್ರ ಕೆ. ಹೆಗ್ಡೆ ನೇತೃತ್ವದ ಅಪರಾಧ ತನಿಖಾ ವಿಭಾಗದ (ಸಿಐಡಿ) ವಿಶೇಷ ತಂಡ ಪಾಟೀಲ್‌ ಅವರನ್ನು 2023ರ ನವೆಂಬರ್‌ನಲ್ಲಿ ಬಂಧಿಸಿತ್ತು. ಅವರ ವಿರುದ್ಧ ಕೊಕಾ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಪಾಟೀಲ್ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಮತ್ತು ಎಸ್‌ಡಿಎ ನೇಮಕ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಐಡಿ ಪಾಟೀಲ್‌ ಅವರನ್ನು ಬಂಧಿಸಿದೆ.

ಪ್ರಕರಣದ ಆರೋಪಪಟ್ಟಿಯ ಪ್ರಕಾರ, ಕಲಬುರಗಿಯ ಕ್ಲಾಸ್‌ ಒನ್‌ ಸಿವಿಲ್‌ ಗುತ್ತಿಗೆದಾರ ಪಾಟೀಲ್‌, ಅಭ್ಯರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಸಹಾಯ ಮಾಡಲು ಬ್ಲೂಟೂತ್‌ ಸಾಧನಗಳು ಮತ್ತು ವಾಕಿ-ಟಾಕಿಗಳಂತಹ ಎಲೆಕ್ಟ್ರಾನಿಕ್‌ ಸಾಧನಗಳನ್ನು ಪೂರೈಸಿದ್ದಾರೆ. ಆರೋಪಿ ಪಾಟೀಲ್ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಇದೇ ರೀತಿಯ ವಂಚನೆ ಎಸಗಿದ್ದಾರೆಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

Related Articles

Comments (0)

Leave a Comment