ಕಾಲ್ತುಳಿತಕ್ಕೆ ಆರ್‌ಸಿಬಿಯೇ ಕಾರಣ; ಸಿಎಟಿ ಅಭಿಪ್ರಾಯ ಪ್ರಶ್ನಿಸಿ ಆರ್‌ಸಿಬಿಯಿಂದ ಹೈಕೋರ್ಟ್‌ಗೆ ಅರ್ಜಿ
- by Prashanth Basavapatna
- July 8, 2025
- 60 Views

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ರದ್ದುಪಡಿಸಿರುವ ಆದೇಶದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕುರಿತು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಉಲ್ಲೇಖಿಸಿರುವ ಅಭಿಪ್ರಾಯಗಳನ್ನು ಪ್ರಶ್ನಿಸಿ ಆರ್‌ಸಿಬಿ ಹೈಕೋರ್ಟ್ ಮೆಟ್ಟಿಲೇರಿದೆ.
ವಿಕಾಸ್ ಕುಮಾರ್ ಅವರ ಅರ್ಜಿಯಲ್ಲಿ ನಾವು ಪ್ರತಿವಾದಿಯಲ್ಲ. ಪ್ರಕರಣದ ಸಂಬಂಧ ನಮ್ಮ ವಾದವನ್ನೂ ಆಲಿಸಿಲ್ಲ. ಹೀಗಿದ್ದರೂ, ದುರ್ಘಟನೆಗೆ ಆರ್‌ಸಿಬಿಯೇ ಕಾರಣ ಎಂದು ಸಿಎಟಿ ಏಕಪಕ್ಷೀಯವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸುವುದಕ್ಕೆ ಆರ್‌ಸಿಬಿ ಕರೆ ನೀಡಿದ್ದರಿಂದ ಅಪಾರ ಪ್ರಮಾಣದಲ್ಲಿ ಜನ ನೆರೆದಿದ್ದು, 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮೇಲ್ನೋಟಕ್ಕೆ ಘಟನೆಗೆ ಆರ್‌ಸಿಬಿಯೇ ಕಾರಣ. ಸೂಕ್ತ ಸಂದರ್ಭದಲ್ಲಿ ಆರ್‌ಸಿಬಿಯು ರಾಜ್ಯ ಸರ್ಕಾರದಿಂದ ವಿಜಯೋತ್ಸವಕ್ಕೆ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಸಿಎಟಿ ಆದೇಶದಲ್ಲಿ ಉಲ್ಲೇಖಿಸಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಏಕಾಏಕಿ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಪೊಲೀಸರಿಗೆ ಜನಸಂದಣಿ ನಿಯಂತ್ರಿಸಲು ಅಸಾಧ್ಯವಾಗಿತ್ತು. ಘಟನೆಗೆ ಆರ್‌ಸಿಬಿಯ ಆತುರದ ನಿರ್ಧಾರವೇ ಕಾರಣ ಎಂಬ ಅಭಿಪ್ರಾಯವನ್ನು ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ರದ್ದುಪಡಿಸಿದ ಸಂದರ್ಭದಲ್ಲಿ ಸಿಎಟಿ ವ್ಯಕ್ತಪಡಿಸಿತ್ತು.
ಸಹಜ ನ್ಯಾಯತತ್ವಕ್ಕೆ ವಿರುದ್ಧ:
ಸಿಎಟಿ ನಮ್ಮ ವಾದ ಆಲಿಸದೇ ಏಕಪಕ್ಷೀಯವಾಗಿ ನಮಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಸಿಎಟಿಯ ಮುಂದೆ ಪಕ್ಷಕಾರನಾಗಿರದಿದ್ದರೂ ಜೂನ್ 4ರಂದು ಸಂಭವಿಸಿದ್ದ ದುರ್ಘಟನೆಗೆ ಮೇಲ್ನೋಟಕ್ಕೆ ಆರ್‌ಸಿಬಿಯೇ ಜವಾಬ್ದಾರಿ ಎಂದು ಹೇಳಿದೆ. ವಿಕಾಸ್ ಕುಮಾರ್ ಅವರ ಪ್ರಕರಣದಲ್ಲಿ ನಾವು ಪ್ರತಿವಾದಿಯೇ ಆಗಿಲ್ಲದಿರುವಾಗ ಸಿಎಟಿ ಆದೇಶದಲ್ಲಿ ನಮ್ಮ ಬಗ್ಗೆ ಉಲ್ಲೇಖಿಸಿರುವ ಅಂಶಗಳು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ. ಇಡೀ ಪ್ರಕರಣದಲ್ಲಿ ನಮಗೆ ವಾದ ಮಂಡಿಸಲು ಅವಕಾಶ ನೀಡದೇ ಸಿಎಟಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಆರ್‌ಸಿಬಿ ಸಲ್ಲಿಸಿರುವ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.
Comments (0)