ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆಗೆ ನಿರ್ಬಂಧ; ಹೈಕೋರ್ಟ್ ಮೊರೆ ಹೋದ ನಿರ್ಮಾಣ ಸಂಸ್ಥೆ
- by Jagan Ramesh
- June 2, 2025
- 114 Views

ಬೆಂಗಳೂರು: ತಮಿಳು ಭಾಷೆಯಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ವಿವಾದ್ಮಾತಕ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಲನಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಇಂಟರ್ನ್ಯಾಷನಲ್ ಹೈಕೋರ್ಟ್ ಮೆಟ್ಟಿಲೇರಿದೆ.
ಕರ್ನಾಟಕದಲ್ಲಿ ಥಗ್ ಲೈಫ್ ಚಲನಚಿತ್ರ ಪ್ರದರ್ಶನಕ್ಕೆ ವಿಧಿಸಿರುವ ನಿರ್ಬಂಧ ರದ್ದುಪಡಿಸಬೇಕು. ಚಿತ್ರ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ನಾರಾಯಣ್ ರಿಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಅರ್ಜಿಯಲ್ಲೇನಿದೆ?
ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಲನಚಿತ್ರ ಜೂನ್ 5ರಂದು ಬಿಡುಗಡೆ ಆಗಲಿದೆ. ಚಿತ್ರಬಿಡುಗಡೆಗೆ ಸಿಬಿಎಫ್‌ಸಿಯಿಂದ ಪ್ರಮಾಣಪತ್ರ ಪಡೆಯಲಾಗಿದೆ. ಆದರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾನೂನುಬಾಹಿರವಾಗಿ ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಿದ್ದು, ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆಗೂ, ಥಗ್ ಲೈಫ್ ಚಲನಚಿತ್ರಕ್ಕೂ ಸಂಬಂಧವಿಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕಮಲಹಾಸನ್ ಸ್ಷಷ್ಟಪಡಿಸಿದ್ದಾರೆ. 300 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ನಿರ್ಮಿಸಲಾಗಿದೆ. ವಾಣಿಜ್ಯ ಮಂಡಳಿಗೆ ಚಿತ್ರ ನಿಷೇಧಿಸಲು ಯಾವುದೇ ಹಕ್ಕಿಲ್ಲ. ಸಿನಿಮಾ ಬಿಡುಗಡೆಗೆ ನಿಷೇಧ ಹೇರುವುದರಿಂದ ಕೋಟ್ಯಂತರ ರೂ. ನಷ್ಟವಾಗಲಿದ್ದು, ಸಿನಿಮಾ ಪ್ರದರ್ಶಿಸುವ ಮತ್ತು ಅದನ್ನು ವೀಕ್ಷಿಸುವ ಜನರ ಹಕ್ಕಿಗೆ ಹಾನಿಯಾಗುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಚಿತ್ರ ಪ್ರದರ್ಶನಕ್ಕೆ ವಿಧಿಸಿರುವ ನಿರ್ಬಂಧ ರದ್ದುಪಡಿಸಬೇಕು. ಸಿನಿಮಾ ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ನಿರ್ಬಂಧಿಸಬೇಕು. ಸಿನಿಮಾ ಪ್ರದರ್ಶನ, ಥಿಯೇಟರ್, ಸಿನಿಮಾ ನೋಡಲು ಹೋಗುವ ಜನರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಹಂಚಿಕೆದಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಅರ್ಜಿಯಲ್ಲಿ ಮನವಿ ಮಾಡಿದೆ.
Related Articles
Thank you for your comment. It is awaiting moderation.
Comments (0)