ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ; ಬಿಜೆಪಿ ನಾಯಕರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
- by Prashanth Basavapatna
- June 20, 2025
- 261 Views
 
                            ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಹಾಗೂ ‘ಸೂಸೈಡ್ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆದಿರುವ ಪೋಸ್ಟರ್ಗಳನ್ನು ಸಾರ್ವಜನಿಕ ಶೌಚಗೃಹದ ಗೋಡೆಗೆ ಅಂಟಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತಂದ ಆರೋಪ ಪ್ರಕರಣದಲ್ಲಿ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ. ರವಿ ಮತ್ತಿತರ ಬಿಜೆಪಿ ನಾಯಕರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಜೆಎಂ ಕೋರ್ಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ) ವಿಚಾರಣೆ ರದ್ದು ಕೋರಿ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ. ರವಿ, ಉಮೇಶ್ ಶೆಟ್ಟಿ ಸೇರಿ 12 ಮಂದಿ ಬಿಜೆಪಿ ಮುಖಂಡರು ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿತಲ್ಲದೆ, ಪ್ರತಿವಾದಿಗಳಾಗಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣವೇನು?
ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಬಿಜೆಪಿಯ ನಾಯಕರು ಮತ್ತು ಕಾಯರ್ತಕರ್ತರು, ‘ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು’ ಎಂದು ಘೋಷಣೆ ಕೂಗುತ್ತಾ 2024ರ ಡಿಸೆಂಬರ್ 31ರಂದು ಬೆಳಗ್ಗೆ 10 ಗಂಟೆಗೆ ಮಾಧವನಗರ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ರಸ್ತೆಯಲ್ಲಿ ಗುಂಪುಗೂಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಮಾಧವ ನಗರ ಜಂಕ್ಷನ್ನಲ್ಲಿ ಸಾರ್ವಜನಿಕ ಶೌಚಗೃಹದ ಗೋಡೆಗೆ ‘ಸೂಸೈಡ್ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಬರೆದಿರುವ ಪೋಸ್ಟರ್ಗಳನ್ನು ಅನಧಿಕೃತವಾಗಿ ಅಂಟಿಸಿ ನಗರದ ಸೌಂಧರ್ಯಕ್ಕೆ ಧಕ್ಕೆ ತಂದಿದ್ದಾರೆಂಬ ಆರೋಪದಲ್ಲಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
Related Articles
                            Thank you for your comment. It is awaiting moderation.
                        
                                        
                    
                    
                 
                            
                                            
 
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                     
                                                                                                                                                    
Comments (0)