ವಿವಾಹದ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ; ಮದುವೆಯ ಷರತ್ತು ವಿಧಿಸಿ ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್
- by LegalSamachar
- April 2, 2026
- 6 Views
ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಮಂಡ್ಯ ಜಿಲ್ಲೆಯ ಹುಲ್ಲಗಾಲದ ಮಹದೇವ ಅಲಿಯಾಸ್ ಮಾದೇವ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ಆರೋಪಿಗೆ ಏಪ್ರಿಲ್ 2ರಿಂದ ಏಪ್ರಿಲ್ 24ರ ವರೆಗೆ ಜಾಮೀನು ನೀಡಲು ಆದೇಶಿಸಿದೆ.
ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಏಪ್ರಿಲ್ 24ರೊಳಗೆ ಸಂತ್ರಸ್ತೆಯನ್ನು ವಿವಾಹವಾಗಬೇಕು. ಆನಂತರ, ಮದುವೆ ನೋಂದಾಯಿಸಿದ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆರೋಪಿಯ ವಿರುದ್ಧ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಾರೆಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ. ಸದ್ಯ ಅರ್ಜಿದಾರರು ಮತ್ತು ದೂರುದಾರರು ಮಾತುಕತೆ ನಡೆಸಿ ರಾಜಿ ಮಾಡಿಕೊಂಡಿದ್ದು, ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಲು ಸಿದ್ಧರಿದ್ದಾರೆ. ವಿವಾಹಕ್ಕೆ ಇಬ್ಬರೂ ಒಪ್ಪಿದ್ದಾರೆ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರಕರಣದ ವಿಚಿತ್ರ ಸಂಗತಿಗಳನ್ನು ಗಮನಿಸಿದ ನಂತರ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಬೇಕಿರುವುದರಿಂದ ಆತನಿಗೆ ಮಧ್ಯಂತರ ಜಾಮೀನು ನೀಡುವುದು ಸೂಕ್ತವೆಂಬ ತೀರ್ಮಾನಕ್ಕೆ ಬರಲಾಗಿದೆ. ಆದ್ದರಿಂದ, ಆತನನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಆದೇಶಿಸಿತು.
Related Articles
Thank you for your comment. It is awaiting moderation.



Comments (0)