ಕೋವಿಡ್ ವೇಳೆ ದುಬಾರಿ ಬೆಲೆಗೆ ಪಿಪಿಇ ಕಿಟ್ ಪೂರೈಕೆ; ಹೈಕೋರ್ಟ್‌ಗೆ ಕುನ್ಹಾ ಸಮಿತಿಯ ವರದಿ ಸಲ್ಲಿಸಿದ ಸರ್ಕಾರ

ಬೆಂಗಳೂರು: ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದುಬಾರಿ ದರಕ್ಕೆ ಪಿಪಿಇ ಕಿಟ್‌ಗಳನ್ನು ಪೂರೈಸಿದ ಆರೋಪ ಸಂಬಂಧ ಖಾಸಗಿ ಕಂಪನಿಗಳಾದ ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಹಾಗೂ ಲಾಜ್ ಎಕ್ಸ್‌‌ಪೋರ್ಟ್ ಲಿಮಿಟೆಡ್‌ ವಿರುದ್ಧ ನ್ಯಾಯಮೂರ್ತಿ ಜಾನ್ ಮೈಕಲ್‌ ಕುನ್ಹಾ ಅವರ ಏಕಸದಸ್ಯ ಸಮಿತಿ ಸಲ್ಲಿಸಿರುವ ವರದಿಯ ಭಾಗವನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.

ಕೋವಿಡ್‌ ಸಂದರ್ಭದಲ್ಲಿ ಪಿಪಿಇ ಕಿಟ್‌ ಇನ್ನಿತರ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿರುವ ಎರಡೂ ಖಾಸಗಿ ಕಂಪನಿಗಳಿಗೆ ಬಾಕಿ ಹಣ ಪಾವತಿಸುವಂತೆ ನಿರ್ದೇಶಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೂಬೆನ್ ಜಾಕಬ್, ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಹಾಗೂ ಲಾಜ್ ಎಕ್ಸ್‌‌ಪೋರ್ಟ್ ಲಿಮಿಟೆಡ್ ಕಂಪನಿಗಳು ಟೆಂಡರ್ ಪಡೆದುಕೊಂಡಿದ್ದವು. ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಹೊಸದಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳದೆ ಅಧಿಕಾರಿಗಳ ಜತೆ ಶಾಮೀಲಾಗಿ ಈ ಎರಡೂ ಕಂಪನಿಗಳು ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ಪೂರೈಸಿವೆ. ಈ ವೇಳೆ, ಪ್ರತಿ ಪಿಪಿಇ ಕಿಟ್‌ಗೆ 400 ರೂ. ಮೂಲ ಬೆಲೆ ಇದ್ದರೂ, ಅವುಗಳನ್ನು 1,312 ರೂ. ಗಳಿಗೆ ಪೂರೈಸಲಾಗಿದೆ ಎಂದರು.

ಈ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರು ತನಿಖೆ ನಡೆಸಿದ್ದು, ಅಕ್ರಮ ಪತ್ತೆ ಮಾಡಿದ್ದಾರೆ. ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಇಡೀ ಕೋವಿಡ್ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ವರದಿ ನೀಡಿದೆ ಎಂದು ತಿಳಿಸಿದರಲ್ಲದೆ, ಆ ವರದಿಯಲ್ಲಿ ಪ್ರೂಡೆಂಟ್ ಮ್ಯಾನೇಜ್ಮೆಂಟ್ ಸಲ್ಯೂಷನ್ ಹಾಗೂ ಲಾಜ್ ಎಕ್ಸ್‌‌ಪೋರ್ಟ್ ಲಿಮಿಟೆಡ್‌ಗೆ ಸಂಬಂಧಿಸಿದ ವರದಿಯ ಭಾಗವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ಲಕೋಟೆ ತೆರೆದ ನ್ಯಾಯಪೀಠ, ವರದಿಯ ಪ್ರತಿಯನ್ನು ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ನೀಡುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿತಲ್ಲದೆ, ವರದಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕಂಪನಿಗಳ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.

ಪ್ರಕರಣವೇನು?
ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಿದ ಬಿಲ್ ಮೊತ್ತ ಪಾವತಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಖಾಸಗಿ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. 6 ವಾರಗಳಲ್ಲಿ ಬಾಕಿ ಬಿಲ್ ಮೊತ್ತ 38.26 ಕೋಟಿ ರೂ. ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ 2024ರ ಏಪ್ರಿಲ್ 10ರಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

Related Articles

Comments (0)

Leave a Comment