- ಟ್ರಯಲ್ ಕೋರ್ಟ್
- ಹೈಕೋರ್ಟ್
- Like this post: 6
ಪೋಕ್ಸೊ ಪ್ರಕರಣ; ಮುರುಘಾ ಶರಣರ ಖುಲಾಸೆ ಪ್ರಶ್ನಿಸಿ ಸಂತ್ರಸ್ತೆಯರಿಂದ ಹೈಕೋರ್ಟ್‌ಗೆ ಮೇಲ್ಮನವಿ
- by Jagan Ramesh
- December 10, 2025
- 30 Views
ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮರುಘಾ ಶರಣರು ಹಾಗೂ ಇತರ ಇಬ್ಬರನ್ನು ಖುಲಾಸೆಗೊಳಿಸಿರುವ ಚಿತ್ರದುರ್ಗ ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸುವಂತೆ ಹಾಗೂ ಖುಲಾಸೆಗೊಂಡಿರುವವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸುವಂತೆ ಕೋರಿ ಬಾಲಕಿಯರು ಎರಡು ಪ್ರತ್ಯೇಕ ಮೇಲ್ಮನವಿಗಳನ್ನು ಸಲ್ಲಿಸಿದ್ದು, ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು, ಖುಲಾಸೆಗೊಂಡಿರುವ ಶಿವಮೂರ್ತಿ ಮುರುಘಾ ಶರಣರು, ಎಸ್. ರಶ್ಮಿ ಮತ್ತು ಎ.ಜೆ. ಪರಮಶಿವಯ್ಯ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಮೇಲ್ಮನವಿಗಳು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಸಂತ್ರಸ್ತೆಯರ ಆಕ್ಷೇಪವೇನು?
• ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012ರ (ಪೋಕ್ಸೊ) ಕಾನೂನುಗಳು ಮತ್ತು ಸುಪ್ರೀಂಕೋರ್ಟ್ ವಿಧಿಸಿರುವ ಚೌಕಟ್ಟುಗಳನ್ನು ಪಾಲಿಸುವಲ್ಲಿ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಫಲವಾಗಿದೆ. ಆರೋಪಿಗಳ ಖುಲಾಸೆ ಆದೇಶವು ಕಾನೂನಿನಡಿ ಸಮರ್ಥನೀಯವಲ್ಲ.
• ಲೈಂಗಿಕ ದೌರ್ಜನ್ಯದ ಬಗ್ಗೆ ನಾವು ಸ್ಪಷ್ಟ ಹೇಳಿಕೆ ನೀಡಿದ್ದೆವು. ಸ್ವಾಮೀಜಿ ಖಾಸಗಿ ಕೋಣೆಗೆ ಹಿಂಬಾಗಿಲಿದ್ದು, ಆ ಬಗ್ಗೆ ಸ್ಥಳ ಪರಿಶೀಲನೆ ಮನವಿ ಮಾಡಿದ್ದೆವು. ನಮ್ಮ ಹೇಳಿಕೆ ಮತ್ತು ಈ ಮನವಿಯನ್ನು ಸೆಷನ್ಸ್ ನ್ಯಾಯಾಲಯ ಪರಿಗಣಿಸಿಲ್ಲ. ಆರೋಪಿಗಳ ಕೃತ್ಯದ ಬಗ್ಗೆ ನಾವು ತಂದೆ, ತಾಯಿ, ಸ್ನೇಹಿತೆಯರಿಗೆ ತಿಳಿಸಿಲ್ಲ. ಇದರಿಂದ ನಮ್ಮ ಆರೋಪಗಳು ನಂಬಲಸಾಧ್ಯ ಮತ್ತು ಅಸಹಜವೆಂದು ವ್ಯಾಖ್ಯಾನಿಸಿರುವುದು ಸರಿಯಲ್ಲ.
• ಹಾಸ್ಟೆಲ್‌ನಲ್ಲಿ 13 ವಿದ್ಯಾರ್ಥಿನಿಯರಿದ್ದರು. ಅವರಲ್ಲಿ ಕೇವಲ ನಾಲ್ವರು ವಿದ್ಯಾರ್ಥಿನಿಯರನ್ನು ವಿಚಾರಣೆಗೊಳಪಡಿಸಲಾಗಿದೆ. ಕೇವಲ ಪ್ರತಿಕೂಲ ಸಾಕ್ಷಿಗಳನ್ನೇ ಪರಿಗಣಿಸಿ ಘಟನೆ ನಡೆದಿಲ್ಲ ಎಂದು ತೀರ್ಮಾನಿಸಿರುವ ಸೆಷನ್ಸ್ ಕೋರ್ಟ್ ಕ್ರಮ ಸರಿಯಲ್ಲ.
• ನಾವು ನುಡಿದ ಸಾಕ್ಷ್ಯವನ್ನು ಪರಿಗಣಿಸಬೇಕೆ ಹೊರತು ವೈದ್ಯರ ವರದಿಯನ್ನಲ್ಲ. ಸುಳ್ಳು ಆರೋಪ ಹೊರಿಸುವುದರಿಂದ ನಮಗೆ ಲಾಭವಿಲ್ಲ ಎಂಬ ವಾದಾಂಶವನ್ನ ಪರಿಗಣಿಸಿಲ್ಲ. ಸ್ವಾಮೀಜಿ ಬಗ್ಗೆ ಎಸ್.ಕೆ. ಬಸವರಾಜನ್ ಅವರಿಗೆ ವೈಷಮ್ಯವಿತ್ತೆಂದು ವ್ಯಾಖ್ಯಾನಿಸಿರುವುದು ನ್ಯಾಯಸಮ್ಮತವಾಗಿಲ್ಲ.
ಪ್ರಕರಣದ ಹಿನ್ನೆಲೆ:
ಮುರುಘಾ ಮಠದ ವಸತಿ ನಿಲಯದಲ್ಲಿ ಇದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುರುಘಾ ಶರಣರು ನಮ್ಮನ್ನು ಖಾಸಗಿ ಕೊಠಡಿಗೆ ಹಿಂಬಾಗಿಲಿನಿಂದ ಕರೆಸಿಕೊಂಡು ಚಾಕೊಲೇಟ್‌ಗಳು ಮತ್ತು ಹಣ್ಣು ಇತ್ಯಾದಿಗಳನ್ನು ತಿನ್ನಲು ನೀಡುತ್ತಿದ್ದರು. ಇದರಲ್ಲಿ ಮಾದಕ ಪದಾರ್ಥಗಳನ್ನು ಬೆರಸಲಾಗಿತ್ತು. ಅದನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಬಾರದು. ಬಹಿರಂಗಪಡಿಸಿದರೆ ತಂದೆ-ತಾಯಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು. ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮತ್ತವರ ಪತ್ನಿ ಸೌಜನ್ಯಾ ನೆರವಿನಿಂದ ಮೈಸೂರಿನ ಸರ್ಕಾರೇತರ ಸಂಸ್ಥೆ ಒಡನಾಡಿ ತಲುಪಿ, ಅವರ ನೆರವಿನಿಂದ ಮೈಸೂರಿನ ನಜಾರಾಬಾದ್ ಠಾಣೆಯಲ್ಲಿ ದೂರು ನೀಡಿದ್ದಾಗಿ ಬಾಲಕಿಯರು ದೂರಿನಲ್ಲಿ ವಿವರಿಸಿದ್ದರು. ಆನಂತರ ಪ್ರಕರಣ ಚಿತ್ರದುರ್ಗದ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಕಳೆದ ನವೆಂಬರ್ 26ರಂದು ಐಪಿಸಿ ಸೆಕ್ಷನ್‌ಗಳಾದ 376(2)(ಎನ್), 376(3), 323, 504, 506, ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳಾದ 5(I), 6 ಮತ್ತು 17ರ ಆರೋಪಗಳಿಂದ ಸ್ವಾಮೀಜಿ ಸೇರಿ ಮೂವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.
Related Articles
Thank you for your comment. It is awaiting moderation.


Comments (0)