ಸುಧಾರಿತ ವೈದ್ಯಕೀಯ ನಿರ್ದೇಶನಗಳ ಜಾರಿಗೆ ಕೋರಿ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Jagan Ramesh
- September 25, 2024
- 43 Views
ಬೆಂಗಳೂರು: ಮಾರಣಾಂತಿಕ ಕಾಯಿಲೆ ವಾಸಿಯಾಗದ ಹಂತ ತಲುಪಿ ವ್ಯಕ್ತಿಯೊಬ್ಬ ಮರಣಶಯ್ಯೆಯಲ್ಲಿದ್ದಾಗ ಆತನಿಗೆ ಘನತೆಯ ಸಾವು ಸಾಧ್ಯವಾಗಿಸುವ ಮರಣ ಇಚ್ಛೆಯ ಉಯಿಲು (ಲಿವಿಂಗ್ ವಿಲ್) ಬರೆಯುವ ಕುರಿತು ಸುಪ್ರೀಂಕೋರ್ಟ್ 2023ರಲ್ಲಿ ಜಾರಿಗೊಳಿಸಿರುವ ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಅನುಷ್ಠಾನಕ್ಕೆ ತರಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಹೈಕೋರ್ಟ್ ವಕೀಲರೂ ಆಗಿರುವ ಬೆಂಗಳೂರು ನಿವಾಸಿ 76 ವರ್ಷದ ಶಿವಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿ ಕುರಿತು ವಾದ ಆಲಿಸಿದ ನ್ಯಾಯಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲೆ ಸ್ನೇಹ ನಾಗರಾಜ್ ವಾದ ಮಂಡಿಸಿದರು.
ಪ್ರಕರಣವೇನು?
ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಯಾವಾಗ ಕೊನೆಯುಸಿರೆಳೆಯಬೇಕೆಂದು ನಿರ್ಧರಿಸುವ ಹಕ್ಕಿರುತ್ತದೆ. ಮನುಷ್ಯ ಗೌರವಯುತವಾಗಿ ಸಾಯುವ ಹಕ್ಕು ಹೊಂದಿದ್ದು, ಆತನಿಗೆ ಮಾರ್ಗಸೂಚಿಗಳ ಅನ್ವಯ ದಯಾಮರಣಕ್ಕೆ ಅನುಮತಿ ನೀಡಬಹುದು. ಪುನಶ್ಚೇತನಗೊಳ್ಳುವ ಯಾವುದೇ ಸಾಧ್ಯತೆಗಳು ಇಲ್ಲದ ಪರಿಸ್ಥಿತಿಯಿದ್ದಾಗ, ಬದುಕಿರಲು ಇಚ್ಛಿಸದ ವ್ಯಕ್ತಿಗೆ ಸಂಕಷ್ಟದಲ್ಲಿ ಜೀವನ ಮುಂದುವರಿಸುವ ಸ್ಥಿತಿ ಇರಬಾರದು. ಒಂದು ವೇಳೆ ವ್ಯಕ್ತಿ ಅಥವಾ ರೋಗಿ ತಾನು ಭವಿಷ್ಯದಲ್ಲಿ ಕೋಮಾ ಸ್ಥಿತಿಗೆ ತಲುಪಿದರೆ ಜೀವರಕ್ಷಕದ ಸಹಾಯದಿಂದ ಬದುಕಿಸದಿರಿ ಎಂದು ಲಿವಿಂಗ್ ವಿಲ್ ಬರೆಯಲು ಅವಕಾಶ ನೀಡಿ ಸುಪ್ರೀಂಕೋರ್ಟ್ 2018ರಲ್ಲಿ ಐತಿಹಾಸಿಕ ತೀರ್ಪು ನೀಡಿತ್ತು.
ಅದರಂತೆ, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವ ರಕ್ಷಕ ಸಾಧನ ತೆಗೆಯುವುದಕ್ಕೆ ಪ್ರಥಮ ದರ್ಜೆಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್ಸಿ) ಅನುಮತಿಯನ್ನು ಈ ಮೊದಲು ಕಡ್ಡಾಾಯಗೊಳಿಸಲಾಗಿತ್ತು. ಆದರೆ, ಈ ಆದೇಶವನ್ನು 2023ರಲ್ಲಿ ಮಾರ್ಪಡಿಸಿದ್ದ ಸುಪ್ರೀಂಕೋರ್ಟ್ ಮಾರ್ಗಸೂಚಿಯನ್ನು ಸರಳೀಕರಿಸಿತ್ತು. ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ವಯ ಮುಂದೆ ಮರಣ ಇಚ್ಛೆಯ ಉಯಿಲು ಬರೆಯುವ ವ್ಯಕ್ತಿಯು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ದಾಖಲೆಗಳಿಗೆ ಸಹಿ ಹಾಕಬೇಕು. ಅದನ್ನು ನೋಟರಿ ಅಥವಾ ಗೆಜೆಟೆಡ್ ಅಧಿಕಾರಿ ದೃಢೀಕರಿಸಬೇಕು ಎಂದು ಹೇಳಲಾಗಿತ್ತು.
ಈ ಸುಧಾರಿತ ವೈದ್ಯಕೀಯ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದ್ದು, ಮರಣ ಇಚ್ಛೆಯ ಉಯಿಲು ಸಂಬಂಧ 2023ರ ಜನವರಿ 24ರಂದು ಸುಪ್ರೀಂಕೋರ್ಟ್ ಹೊರಡಿಸಿರುವ ಮಾರ್ಪಡಿಸಿದ ಆದೇಶದಂತೆ ಸ್ಥಳೀಯ ಸಕ್ಷಮ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಅಧಿಕಾರಿಯು ಸುಧಾರಿತ ವೈದ್ಯಕೀಯ ನಿರ್ದೇಶನಗಳಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹ, ನಿರ್ವಹಣೆ ಮತ್ತು ಅವುಗಳನ್ನು ಸಂರಕ್ಷಿಸಿಡುವ ಅಧಿಕಾರವನ್ನು ಖಾತರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಸ್ಥಳೀಯ ಸಕ್ಷಮ ಅಧಿಕಾರಿಯು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಅಗತ್ಯ ನಿಯಮಗಳು, ಮಾರ್ಗಸೂಚಿಗಳನ್ನು ರೂಪಿಸಿ, ಅವುಗಳನ್ನು ಜಾರಿಗೊಳಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Related Articles
Thank you for your comment. It is awaiting moderation.
Comments (0)