ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಆಕ್ಷೇಪಿಸಿದ ಪಿಐಎಲ್; ಬುಧವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- by Jagan Ramesh
- October 22, 2024
- 136 Views
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಅಕ್ಟೋಬರ್ 26ರಂದು ಬೆಂಗಳೂರು ಕಂಬಳ ಸಮಿತಿ ಆಯೋಜಿಸಲಿರುವ ಕಂಬಳ ಸ್ಪರ್ಧೆಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ (ಅಕ್ಟೋಬರ್ 23) ಮುಂದೂಡಿದೆ.
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಬೆಂಗಳೂರಿನಲ್ಲಿ ಕಂಬಳ ಸ್ಪರ್ಧೆ ನಡೆಸುವುದನ್ನು ಆಕ್ಷೇಪಿಸಿದರಲ್ಲದೆ, ಸುಪ್ರೀಂಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಸಾಂಪ್ರದಾಯಿಕ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಆಯೋಜಿಸಬೇಕಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ವಕೀಲೆ ನಿಲೋಫರ್ ಅಕ್ಬರ್, ಪ್ರಕರಣದಲ್ಲಿ ಸಾಕಷ್ಟು ಕಾನೂನಿನ ಅಂಶಗಳು ಅಡಗಿದ್ದು, ಈ ಕುರಿತು ಅಡ್ವೊಕೇಟ್ ಜನರಲ್ ಅವರು ಸರ್ಕಾರದಿಂದ ಸೂಚನೆ ಪಡೆದು ವಾದ ಮಂಡಿಸಲಿದ್ದಾರೆ. ಸದ್ಯ ಅಡ್ವೊಕೇಟ್ ಜನರಲ್ ಅವರು ದೆಹಲಿಯಲ್ಲಿದ್ದಾರೆ. ಆದ್ದರಿಂದ, ಅರ್ಜಿ ವಿಚಾರಣೆಯನ್ನು ಒಂದು ಅಥವಾ ಎರಡು ದಿನಗಳ ಕಾಲ ಮುಂದೂಡಬೇಕು ಎಂದು ಕೋರಿದರು.
ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ಅರ್ಜಿಯನ್ನು ಬುಧವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.
ಟ್ರಕ್ ಮೂಲಕ ನೂರಾರು ಕೋಣಗಳು ಬೆಂಗಳೂರಿಗೆ:
ವಿಚಾರಣೆ ವೇಳೆ ಧ್ಯಾನ್ ಚಿನ್ನಪ್ಪ ಅವರು ಸಾಂಪ್ರಾದಾಯಿಕ ಸ್ಪರ್ಧೆಯಾಗಿರುವ ಕಂಬಳವನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ವಿಐಪಿ ಪಾಸ್ಗಳನ್ನು ವಿತರಿಸಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳು ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಕಳೆದ ವರ್ಷದಿಂದ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗುತ್ತಿದೆ. ಆನಂತರ ಶಿವಮೊಗ್ಗದಲ್ಲೂ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ. ಇದಕ್ಕಾಗಿ ಅಂದಾಜು 200 ಕೋಣಗಳನ್ನು 300 ಕಿ.ಮೀ. ದೂರದ ದಕ್ಷಿಣ ಕನ್ನಡ ಜಿಲ್ಲೆಯಿಂದ ಟ್ರಕ್ಗಳ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ಇದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು.
ಪ್ರಾಣಿ ಹಿಂಸೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕದಲ್ಲಿ ಕಂಬಳ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಂಥ ಸಾಂಪ್ರದಾಯಿಕ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಸಾಂಪ್ರಾದಾಯಿಕ ಸ್ಪರ್ಧೆ ಕಂಬಳವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಂದೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ರಾಜ್ಯ ಸರ್ಕಾರವೇ ಹೇಳಿದೆ. ಆದರೆ, ಈಗ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗುತ್ತಿದ್ದು, ಅದಕ್ಕಾಗಿ ಕೋಣಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಅಂದಾಜು 300 ಕಿ.ಮೀ. ಸಂಚರಿಸಿ, ದಣಿದ ಕೋಣಗಳನ್ನು ಸ್ಪರ್ಧೆಗೆ ಇಳಿಸಲಾಗುತ್ತದೆ. ಇದು ಪ್ರಾಣಿ ಹಿಂಸೆಯಾಗುತ್ತದೆ. ಆದ್ದರಿಂದ, ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರಿಗೆ ಟ್ರಕ್ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)