ಬೀದಿ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಬಿಡ್ ಪ್ರಶ್ನಿಸಿ ಪಿಐಎಲ್; ಸರ್ಕಾರ, ಪಾಲಿಕೆಗೆ ಹೈಕೋರ್ಟ್ ನೋಟಿಸ್

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳಿಗೆ ಅಳವಡಿಸಲು ಮೈಕ್ರೋಚಿಪ್‌ ಪೂರೈಕೆಗಾಗಿ ಬಿಬಿಎಂಪಿ ಆಹ್ವಾನಿಸಿರುವ ಬಿಡ್‌ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಬಿಬಿಂಪಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಸೇವ್ ಅವರ್ ಅನಿಮಲ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಾದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿತು. ಜತೆಗೆ, ಮುಂದಿನ ವಿಚಾರಣೆ ವೇಳೆ ಎಲ್ಲ ಪ್ರತಿವಾದಿಗಳು ಅರ್ಜಿಗೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಿ ಅರ್ಜಿ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಕಿರೀಟ್‌ ಜವಳಿ ವಾದ ಮಂಡಿಸಿ, ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಸಂಬಂಧ ಬಿಡ್ ಆಹ್ವಾನಿಸಲು ಬಿಬಿಎಂಪಿಗೆ ಅಧಿಕಾರವಿಲ್ಲ. ಜತೆಗೆ, ಆ ಕಾರ್ಯ ಬಿಬಿಎಂಪಿಯ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ, ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮ-2023ರಲ್ಲಿ ಮೈಕ್ರೋಚಿಪ್‌ಗಳನ್ನು ಖರೀದಿಸಿ ಬೀದಿ ನಾಯಿಗಳಲ್ಲಿ ಅಳವಡಿಸಲು ಟೆಂಡರ್ ಕರೆಯುವುದಕ್ಕೆ ಅವಕಾಶವಿಲ್ಲ. ಇದು ಸಾಕು ನಾಯಿಗಳಿಗೆ ಮಾತ್ರ ಅವಕಾಶವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಬಿಬಿಎಂಪಿ ಅನುಮತಿ ಪಡೆದಿಲ್ಲ. ಕೇಂದ್ರ ಸಮಿತಿಯನ್ನೂ ಸಂಪರ್ಕಿಸಿಲ್ಲ. ಈ ಸಂಬಂಧ ಹರಾಜು ಪ್ರಕ್ರಿಯೆ ಪ್ರಾರಂಭಿಸುವುದಕ್ಕೆ ಬಿಬಿಎಂಪಿಗೆ ಅಧಿಕಾರವಿಲ್ಲ. ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ.
ಮೈಕ್ರೋಚಿಪ್ ಅಳವಡಿಸುವುದು ಬೀದಿ ನಾಯಿಗಳ ಮೇಲೆ ಮಾಡುವ ದಾಳಿಯಾಗಿದೆ. ಇದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೈಕ್ರೋಚಿಪ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ 2024ರ ಫೆಬ್ರವರಿ 29ರಂದು ಬಿಬಿಎಂಪಿ ಹೊರಡಿಸಿರುವ ಪ್ರಸ್ತಾವನೆ ರದ್ದುಗೊಳಿಸಬೇಕು ಮತ್ತು ಟೆಂಡರ್ ಅಧಿಸೂಚನೆಗಳನ್ನು ಹೊರಡಿಸುವಾಗ ಪ್ರಾಣಿ ಜನನ ನಿಯಂತ್ರಣ ನಿಯಮಗಳು-2023 ಅನ್ನು ಅನುಸರಿಸಲು ನಿಗಮಕ್ಕೆ ನಿರ್ದೇಶನ ನೀಡಬೇಕು. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೀದಿ ನಾಯಿಗಳ ಮೈಕ್ರೋಚಿಪ್ಪಿಂಗ್ ಪ್ರಾಯೋಗಿಕ ಯೋಜನೆಗೆ ತಕ್ಷಣ ತಡೆ ನೀಡಬೇಕು ಎಂದು ಕೋರಿದರಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಪ್ರಸ್ತಾವನೆ ಸಲ್ಲಿಸುವುದು ಮತ್ತು ಟೆಂಡರ್ ಪ್ರಕ್ರಿಯೆ ನಡೆಸಿರುವ ಬಿಬಿಬಿಎಂಪಿಗೆ ದೊಡ್ಡ ಮಟ್ಟದ ದಂಡ ವಿಧಿಸಬೇಕು ಎಂದು ಮನವಿ ಮಾಡಿದರು.

Related Articles

Comments (0)

Leave a Comment