ರೈತರಿಗೆ ಅನ್ಯಾಯವಾಗುವಂತಹ ಅರ್ಜಿಗಳನ್ನು ಪರಿಗಣಿಸಲಾಗದು – ಹೈಕೋರ್ಟ್

ಬೆಂಗಳೂರು: ರೈತರ ಬದುಕಿನ ಜತೆ ಆಟವಾಡುವುದಕ್ಕೆ ಅವಕಾಶ ನೀಡಲಾಗದು. ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗದು ಎಂದು ಹೈಕೋರ್ಟ್‌ ತೀಕ್ಷ್ಣವಾಗಿ ನುಡಿದಿದೆ.

ಕೋವಿಡ್‌ ಸಂದರ್ಭದಲ್ಲಿ ಟೊಮೆಟೊ ಖರೀದಿಸಿ ರೈತರಿಗೆ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಕೋಲಾರದ ಮೆಹಬೂಬ್‌ ಪಾಷಾ ಮತ್ತು ಮುಬಾರಕ್‌ ಪಾಷಾ ಅಲಿಯಾಸ್‌ ಆಯಿನ್‌ ಖಾನ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆರೋಪಿಗಳು ತರಕಾರಿ ಮಾರಾಟಗಾರರಾಗಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಇತ್ತು. ಆದರೆ, ಖರೀದಿಸಿರುವ ಟೊಮೆಟೊಗೆ ನಗದು ನೀಡಿದ್ದಾರೆ. ಟೊಮೆಟೊ ಕೊಳೆತದ್ದರಿಂದ ಅವು ಮಾರಾಟವಾಗಿಲ್ಲ. ಮಧ್ಯವರ್ತಿಗಳು ಸಹ ರೈತರನ್ನು ದಾರಿ ತಪ್ಪಿಸಿದ್ದಾರೆ. ಅರ್ಜಿದಾರರ ವಿರುದ್ಧ ನಕಲಿ ದೂರು ದಾಖಲಿಸಲಾಗಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿದರು.

ಆಗ ನ್ಯಾಯಪೀಠ, ಟೊಮೆಟೊ ತೆಗೆದುಕೊಂಡು ರೈತರಿಗೆ ದುಡ್ಡು ಕೊಡದಿದ್ದರೆ ಹೇಗೆ? ಬಡ ರೈತರಿಗೆ ನೀವು ಹೇಗೆ ವಂಚಿಸುತ್ತೀರಿ? ಕೋವಿಡ್‌ ಸಂದರ್ಭವಾಗಲಿ, ಯಾವುದೇ ಸಂದರ್ಭವಾಗಲಿ, ನೀವು ಟೊಮೆಟೊ ತೆಗೆದುಕೊಂಡಿದ್ದೀರಲ್ಲವೇ? ಟೊಮೆಟೊ ಖರೀದಿಸಿ, ಅದು ಮಾರಾಟವಾಗದಿದ್ದರೆ ರೈತರಿಗೆ ವಾಪಸ್‌ ತೆಗೆದುಕೊಳ್ಳಿ ಎನ್ನಲಾಗುತ್ತದೆಯೇ? ಏನಿದರ ಅರ್ಥ? ಅರ್ಜಿದಾರರಿಗೆ ಟೊಮೆಟೊ ಮಾರಾಟ ಮಾಡಿರುವವರು ರೈತರಲ್ಲ ಎಂದಿಟ್ಟುಕೊಳ್ಳೋಣ, ಆದರೆ ಅವರು ಖರೀದಿಸಿರುವ ಟೊಮೆಟೊ ಸಿಕ್ಕಿದ್ದಾದರೂ ಯಾರಿಂದ? ಅಂತಿಮವಾಗಿ ರೈತರ ಹೊಟ್ಟೆಗೇ ಏಟು ಬೀಳುವುದು ಎಂದು ಬೇಸರದಿಂದ ನುಡಿಯಿತು.

ರೈತರ ಬದುಕಿನ ಜತೆ ಆಟ:
ರೈತರಿಗೆ ಅನ್ಯಾಯವಾಗುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. 50 ಸಾವಿರ, 1 ಲಕ್ಷ, ಗರಿಷ್ಠ 2.92 ಲಕ್ಷ ರೂ. ಪಾವತಿಸಬೇಕಿದೆ. ಟೊಮೆಟೊ ತೆಗೆದುಕೊಂಡು ದುಡ್ಡು ಕೊಡುವುದಿಲ್ಲ ಎಂದರೆ ಹೇಗೆ? ರೈತನ ಗತಿ ಏನಾಗಬೇಕು? ಇಂಥ ಪ್ರಕರಣಗಳಲ್ಲಿ ಪ್ರಕರಣ ದಾಖಲಾಗಬಾರದು. ಇದಕ್ಕೆ ತಡೆ ನೀಡುವುದಿಲ್ಲ. ಪ್ರಕರಣದ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ಅನುಮತಿಸಲಾಗುವುದು. ಏಕೆಂದರೆ, ನೀವು ರೈತರ ಬದುಕಿನ ಜತೆ ಆಟವಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿತು.

ಮಧ್ಯವರ್ತಿಗಳ ಮೂಲಕ ಟೊಮೆಟೊ ಖರೀದಿಸುತ್ತೀರಿ. ಅವರ ಮೂಲಕ ರೈತರಿಗೆ ಹಣ ಸಂದಾಯವಾಗುತ್ತದೆ. ಒಟ್ಟಾರೆ ರೈತನಿಗೆ ಸಿಗುವ ಹಣವೇ ಕಡಿಮೆ. ಹೀಗಿದ್ದರೂ, ರೈತರಿಗೆ ಹಣ ನೀಡುವುದಿಲ್ಲ ಎಂದರೆ ಹೇಗೆ? ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಎಷ್ಟು ಹಣ ಪಾವತಿಸಲಾಗಿದೆ, ಎಷ್ಟು ಬಾಕಿ ಇದೆ ಎಂದು ವಿವರಿಸಲಾಗಿದೆ. ರೈತರು ಎಲ್ಲಿಗೆ ಹೋಗಬೇಕು? ದೊಡ್ಡದೊಡ್ಡವರು ಕೋಟ್ಯಂತರ ರೂ. ಹಣ ವಸೂಲಿಗೆ ಅರ್ಜಿ ಹಾಕುತ್ತಾರಲ್ಲ. ಅದರಲ್ಲಿ ಬೇಕಾದರೆ ತಡೆ ನೀಡುತ್ತೇನೆ. ಇಂಥ ಪ್ರಕರಣದಲ್ಲಿ ತಡೆ ನೀಡುವುದಿಲ್ಲ. ರೈತರಿಗೆ ಬೇರೆ ದಾರಿ ಏನಿದೆ? ಈ ಅರ್ಜಿಯಲ್ಲಿ ತಡೆ ನೀಡುವುದಿರಲಿ, ಇದಕ್ಕೆ ಆದ್ಯತೆಯನ್ನೇ ನೀಡುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿತು.

ಅಂತಿಮವಾಗಿ, ನಿಗದಿತ ಕಾಲಾವಧಿಯಲ್ಲಿ ವಿಚಾರಣೆ ಮುಗಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ಬೇಕಿದ್ದರೆ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದಿಂದ ಖುಲಾಸೆ ಕೋರಿ ಅರ್ಜಿ ಸಲ್ಲಿಸಬಹುದು ಎಂದ ನ್ಯಾಯಪೀಠ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment