ಟೈಪಿಸ್ಟ್‌ಗಳ ಸೇವೆ ಕಾಯಮಾತಿಗೆ ಕೋರಿ ಅರ್ಜಿ; ಸರ್ಕಾರ, ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಟೈಪಿಸ್ಟ್ ಹಾಗೂ ಸ್ಟೆನೋಗ್ರಾಫರ್ ಹುದ್ದೆಗೆ ದಿನಗೂಲಿ ಆಧಾರದಲ್ಲಿ ನೇಮಕಗೊಂಡು 30 ವರ್ಷಕ್ಕೂ ಅಧಿಕ ಸಮಯದಿಂದ ಕೆಲಸ ಮಾಡುತ್ತಿರುವ ತಮ್ಮ ಸೇವೆ ಖಾಯಂಗೊಳಿಸುವಂತೆ ಕೋರಿ 7 ನೌಕರರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೈಕೋರ್ಟ್ ನೋಟಿಸ್ ‌ಜಾರಿಗೊಳಿಸಿದೆ.

ಬೆಂಗಳೂರಿನ ಆರ್. ಬಾಲರಾಜು, ಮಂಡ್ಯದ ಕೆ.ಸಿ. ಕೃಷ್ಣ ಮತ್ತಿತರರು ಸಲ್ಲಿಸಿರುವ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರವಾಗಿ ವಕೀಲ ಸ್ಪರ್ಶ್ ಶೆಟ್ಟಿ ವಾದ ಮಂಡಿಸಿದರು.

ಅರ್ಜಿಯಲ್ಲೇನಿದೆ?
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸ್ಟೆನೋಗ್ರಾಫರ್ ಹಾಗೂ ಟೈಪಿಸ್ಟ್ ಹುದ್ದೆಗಳಿಗೆ 1993-1995ರ ಅವಧಿಯಲ್ಲಿ ಅರ್ಜಿದಾರರು ದಿನಗೂಲಿ ಆಧಾರದಲ್ಲಿ ನೇಮಕೊಂಡಿದ್ದಾರೆ. ಸಿ ಮತ್ತು ಡಿ ವೃಂದಕ್ಕೆ ಸೇರುವ ಅವರು ಅಲ್ಲಿಯೇ ಸತತ 30-35 ವರ್ಷ ಸೇವೆ ಸಲ್ಲಿಸಿದ್ದಾರೆ. 2003-2005ರ ಅವಧಿಯಲ್ಲೇ 10 ವರ್ಷ ಸೇವೆ ಪೂರೈಸಿರುವ ಅರ್ಜಿದಾರರು ತಮ್ಮ ಸೇವೆ ಕಾಯಮಾತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಈವರೆಗೂ ಸರ್ಕಾರ ಆ ಮನವಿಗಳನ್ನು ಪರಿಗಣಿಸಿಲ್ಲ. 2006ರಲ್ಲಿ ಉಮಾ ದೇವಿ ಪ್ರಕರಣದಲ್ಲಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ನಿಯಮಾನುಸಾರ ನೇಮಕಗೊಳ್ಳದಿದ್ದರೂ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಿದ್ದರೆ, ಅಂಥವರ ಸೇವೆಯನ್ನು ಒಂದು ಬಾರಿಯ ಪರಿಹಾರವಾಗಿ ಕ್ರಮಬದ್ಧಗೊಳಿಸುವಂತೆ ಸರ್ಕಾರಗಳಿಗೆ ನಿರ್ದೇಶಿಸಿದೆ. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಅರ್ಜಿದಾರರನ್ನು 2014ರಲ್ಲಿ ‘ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಕಲ್ಯಾಣ ಕಾಯ್ದೆ-2012’ರ ವ್ಯಾಪ್ತಿಗೆ ತರಲಾಯಿತು. ಈ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿರುವ ಹಾಗೂ ಕಾಯ್ದೆಯಡಿ ಸೌಲಭ್ಯಗಳನ್ನು ಪಡೆದಿರುವ ಅನೇಕರ ಸೇವೆಯನ್ನು ಕಾಯಂಗೊಳಿಸಿರುವ ಸರ್ಕಾರ ಅಂಥದೇ ಪರಿಸ್ಥಿತಿಯಲ್ಲಿರುವ ಅರ್ಜಿದಾರರ ಸೇವೆ ಸಕ್ರಮಾತಿಗೆ ನಿರಾಕರಿಸಿದೆ. ಸರ್ಕಾರದ ಈ ನಡೆ ತಾರತಮ್ಯದಿಂದ ಕೂಡಿದೆ. ಆದ್ದರಿಂದ, ಸಮಾನತೆಯ ತತ್ವದ ಆಧಾರದಲ್ಲಿ ಅರ್ಜಿದಾರರ ಸೇವೆ ಕಾಯಂಗೊಳಿಸಲು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Related Articles

Comments (0)

Leave a Comment