ನಾಗಮಂಗಲದಲ್ಲಿ ಸಾಮೂಹಿಕ ಗಣಪತಿ ವಿಸರ್ಜನೆ ಮೆರವಣಿಗೆಗೆ ಅನುಮತಿ ಕೋರಿದ ಅರ್ಜಿ; ಮಧ್ಯಂತರ ಮನವಿ ಪರಿಗಣಿಸಲು ಹೈಕೋರ್ಟ್ ನಕಾರ
- by Jagan Ramesh
- September 3, 2025
- 71 Views

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದ ‘ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿ’ ಗುರುತಿಸಿರುವ ನಿರ್ದಿಷ್ಟ ಮಾರ್ಗದ ಮೂಲಕ ಸೆಪ್ಟೆಂಬರ್ 4ರಂದು ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲು ಅನುಮತಿಸುವಂತೆ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ನಿರ್ದೇಶಿಸುವಂತೆ ಸಮಿತಿ ಮಾಡಿದ್ದ ಮಧ್ಯಂತರ ಮನವಿ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ.
ಸಾಮೂಹಿಕ ಗಣಪತಿ ವಿಸರ್ಜನಾ ಸಮಿತಿಯ ಅಧ್ಯಕ್ಷ ಕೆ. ರಾಘವೇಂದ್ರ, ಕೆ.ಎನ್ ಅಶೋಕ್ ಹಾಗೂ ಟಿ.ಎಸ್. ಸಂಜಯ್ ಸಲ್ಲಿಸಿರಿವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ನೀಡಿರುವ ಸಮರ್ಥನೆಗಳ ಹೊರತಾಗಿಯೂ ಇದು ಕಾನೂನು ಜಾರಿ ಸಂಸ್ಥೆಗಳು ನಿರ್ಧರಿಸಬೇಕಾದ ವಿಷಯವಾಗಿದೆ. ಇಂತಹ ವಿಚಾರಗಳಲ್ಲಿ ಆದೇಶ ನೀಡುವ ಮೊದಲು ನ್ಯಾಯಾಲಯ ಎಚ್ಚರಿಕೆಯಿಂದಿರಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮದೇ ಅಭಿಪ್ರಾಯಗಳನ್ನು ಹೊಂದಿರಬೇಕು. ಕಳೆದ ಬಾರಿ ಅಹಿತಕರ ಘಟನೆ ನಡೆದಿದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ನಿರ್ದಿಷ್ಟ ಮಾರ್ಗದಲ್ಲಿ ಮೆರವಣಿಗೆಗೆ ಪೊಲೀಸರು ಅನುಮತಿ ಕೊಟ್ಟಿದ್ದಾರಾದರೂ, ಅರ್ಜಿದಾರರು ಬೇರೆ ಮಾರ್ಗ ಕೇಳುತ್ತಿದ್ದಾರೆ. ಅರ್ಜಿದಾರ ಸಮಿತಿಯು ನೋಂದಾಯಿತ ಸಮಿತಿ ಅಲ್ಲ. ಒಂದು ದಿನ ಹಿಂದಷ್ಟೇ ಅರ್ಜಿ ಸಲ್ಲಿಸಿ, ಇಂದು ಮಧ್ಯಂತರ ಮನವಿ ಕೇಳಲಾಗಿದೆ. ಈ ಹಂತದಲ್ಲಿ ಮಧ್ಯಂತರ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿತಲ್ಲದೆ, ಅರ್ಜಿ ಕುರಿತು ವಿವರವಾದ ವಿಚಾರಣೆ ನಡೆಸಿ ಮುಂದಿನ ವರ್ಷಗಳಿಗೆ ಅನ್ವಯವಾಗುವಂತೆ ಅರ್ಜಿದಾರರ ಮನವಿಯನ್ನು ಕಾನೂನಿನ ಪರಿಧಿಯಲ್ಲಿ ಪರಿಶೀಲಿಸಬಹುದು ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರು ತಮಗೆ ಅನುಕೂಲಕರವಾದ ಮಾರ್ಗದ ಮೂಲಕ ಮೆರವಣಿಗೆ ನಡೆಸುವ ಹಕ್ಕು ಹೊಂದಿದ್ದಾರೆ ಎಂಬುದಕ್ಕೆ ಸುಪ್ರೀಂಕೋರ್ಟ್ನ ಕೆಲ ತೀರ್ಪುಗಳನ್ನು ಉಲ್ಲೇಖಿಸಿದರಲ್ಲದೆ, ಸಂಭವನೀಯ ಪರಿಣಾಮಗಳ ಬಗ್ಗೆ ಆಂತಕ-ಅನುಮಾನ ವ್ಯಕ್ತವಾದಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಇದೊಂದು ಸೂಕ್ಷ್ಮ ವಿಚಾರವಾಗಿದೆ. ಗಣಪತಿ ವಿಸರ್ಜನೆಗೆ ಅರ್ಜಿದಾರ ಸಮಿತಿ ಗುರುತಿಸಿರುವ ಮಾರ್ಗದ ಮಧ್ಯೆ ಮಸೀದಿ ಇದೆ. ಕಳೆದ ವರ್ಷ ಮೆರೆವಣಿಗೆ ವೇಳೆ ಅಹಿತಕರ ಘಟನೆಗಳು ನಡೆದಿವೆ. 20ಕ್ಕೂ ಹೆಚ್ಚು ಎಫ್ಐಆರ್ಗಳು ದಾಖಲಾಗಿದ್ದು, 100 ಮಂದಿ ಆರೋಪಿಗಳಾಗಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
Related Articles
Thank you for your comment. It is awaiting moderation.
Comments (0)