ಕಾರ್ಮಿಕ ಮಂಡಳಿಯ ಬೋಗಸ್ ಸದಸ್ಯರ ಪತ್ತೆಗೆ ಕೋರಿದ ಅರ್ಜಿ; ಸರ್ಕಾರದಿಂದ ವಿವರಣೆ ಕೇಳಿದ ಹೈಕೋರ್ಟ್

ಬೆಂಗಳೂರು: ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಬೋಗಸ್ ಸದಸ್ಯರ ಪತ್ತೆಗೆ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕರ್ನಾಟಕ ರಾಜ್ಯ ನಿರ್ಮಾಣ ಕಾರ್ಮಿಕರ ಕೇಂದ್ರ ಸಂಘ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಂಡಳಿಯಲ್ಲಿ ನಿಧಿ ಹೇಗೆ ಸಂಗ್ರಹವಾಗುತ್ತದೆ. ಕಾರ್ಡ್ ಯಾರಿಗೆ ಕೊಡುತ್ತಾರೆ, ನಿಧಿಯ ಹಣವನ್ನು ಕಾರ್ಡ್ ಹೊಂದಿರುವ ಸದಸ್ಯರಿಗೆ ಯಾವ ವಿಧದಲ್ಲಿ ಖರ್ಚು ಮಾಡಲಾಗುತ್ತದೆ ಎಂಬ ವಿವರಣೆಯ ಅವಶ್ಯಕತೆ ಕಂಡು ಬರುತ್ತಿದೆ. ಆದ್ದರಿಂದ, ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಆ ವಿವರಣೆ ಒದಗಿಸಬೇಕು. ಅದೇ ರೀತಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2019-20ರಲ್ಲಿ 17.57 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದರು. ಕೋವಿಡ್ ಅವಧಿಯಲ್ಲಿ ಸದಸ್ಯರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. 2020ರಿಂದ 2023ರವರೆಗೆ ಸದಸ್ಯರ ಸಂಖ್ಯೆ 47 ಲಕ್ಷಕ್ಕೆ ಏರಿಕೆಯಾಯಿತು. ಅನುಮಾನ ಮೂಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಯಿತು. ಹಾವೇರಿ ಜಿಲ್ಲೆಯೊಂದರಲ್ಲೇ 2.94 ಲಕ್ಷ ಸದಸ್ಯರಲ್ಲಿ 2.23 ಲಕ್ಷ ಬೋಗಸ್ ಸದಸ್ಯರಿದ್ದರು. ಜಿಲ್ಲೆಯಲ್ಲಿ 50 ಸಾವಿರ ಅರ್ಹ ಸದಸ್ಯರಷ್ಟೇ ಇದ್ದರು. ಸೌಲಭ್ಯಗಳು ಸಿಗುತ್ತವೆ ಎಂಬ ಕಾರಣಕ್ಕೆ ನಕಲಿ ದಾಖಲೆಗಳನ್ನು ಕೊಟ್ಟು ಲಕ್ಷಾಂತರ ಜನ ನೋಂದಾಯಿಸಿಕೊಂಡಿದ್ದಾರೆ. ಆದ್ದರಿಂದ, ಕಾರ್ಮಿಕರ ಆಯುಕ್ತರ ನೆರವು ಪಡೆದುಕೊಂಡು ಈ ಬೋಗಸ್ ಸದಸ್ಯರನ್ನು ಪತ್ತೆೆ ಹಚ್ಚಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತನಿಖೆ ನಡೆಸಬೇಕು ಹಾಗೂ ಅಂತಹ ಬೋಗಸ್ ಸದಸ್ಯರನ್ನು ತೆಗೆದುಹಾಕುವಂತೆ ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment