ಕಸಾಪ ಸರ್ವ ಸದಸ್ಯರ ಸಭೆ ರದ್ದು; ಸಹಕಾರ ಸಂಘಗಳ ಉಪ ನಿಬಂಧಕರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌‌ನ (ಕಸಾಪ) 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ರದ್ದುಪಡಿಸಿದ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸುವ ಸಹಕಾರ ಸಂಘಗಳ ಉಪ ನಿಬಂಧಕರ ಕ್ರಮ ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2025ರ ಜೂನ್ 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿತ್ತು.

ಕಲಾಪದ ಮುಕ್ತಾಯದ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಜರಾಗಿ, ಸ್ವಾಯತ್ತ ಮತ್ತು ಪ್ರಾತಿನಿಧಿಕ ಸಂಸ್ಥೆೆ ವಿರುದ್ಧ ಅಧಿಕಾರ ವ್ಯಾಪ್ತಿ ಮೀರಿ ಸಹಕಾರ ಸಂಘಗಳ ಉಪ ನಿಬಂಧಕರು ಕ್ರಮ ಕೈಗೊಂಡಿದ್ದಾರೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕಿದೆ ಎಂದು ಕೋರಿದರು. ಅದಕ್ಕೆ ನ್ಯಾಯಪೀಠ, ಸೋಮವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಜಾಣಗೆರೆ ವೆಂಕಟರಾಮಯ್ಯ ಹಾಗೂ ಡಾ. ವಸುಂಧರಾ ಭೂಪತಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ 2025ರ ಜೂನ್ 29ರಂದು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ರದ್ದುಪಡಿಸಿ ಜೂನ್ 27ರಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದರು.‌

ಜತೆಗೆ, ಎನ್. ಹನುಮೇಗೌಡ ಹಾಗೂ ಇತರರು ನೀಡಿದ ದೂರಿನ ಹಿನ್ನೆೆಲೆಯಲ್ಲಿ 2023-24ರಿಂದ ಇಲ್ಲಿಯವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿಷತ್ತಿಗೆ ಸಂಗ್ರಹವಾಗಿರುವ ಆದಾಯ ದುರುಪಯೋಗಪಡಿಸಿಕೊಂಡಿರುವ, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತರ ವಿಷಯಗಳನ್ನು ಪರಿಶೀಲಿಸಿ ಸೂಕ್ತ ವಿಚಾರಣೆ ನಡೆಸಲು ತನಿಖಾಧಿಕಾರಿಯನ್ನು ನೇಮಕ ಮಾಡಿ ಜೂನ್ 30ರಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

 

Related Articles

Comments (0)

Leave a Comment