ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್; ಗ್ರ್ಯಾಚುಟಿ ವಿಮಾ ನಿಯಮ ಪ್ರಶ್ನಿಸಿದ ಅರ್ಜಿ

ಬೆಂಗಳೂರು: ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಗ್ರ್ಯಾಚುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024’ ಅನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೃಹತ್ ಬೆಂಗಳೂರು ಹೋಟೆಲ್ಸ್‌ ಅಸೋಸಿಯೇಷನ್ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು?
ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳ ಗ್ರ್ಯಾಚುಟಿ ಮೊತ್ತಕ್ಕೆ ವಿಮೆಯ ರಕ್ಷಣೆ ಒದಗಿಸಲು ‘ಕರ್ನಾಟಕ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024’ ಜಾರಿಗೊಳಿಸಿ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆ ಹೊರಡಿಸಿತ್ತು. 10 ಜನ ಮೇಲ್ಪಟ್ಟ ಉದ್ಯೋಗಿಗಳನ್ನು ಹೊಂದಿದ ಸಂಸ್ಥೆಗಳು ಕಡ್ಡಾಯವಾಗಿ 60 ದಿನಗಳಲ್ಲಿ ವಿಮೆಯನ್ನು ಅಳವಡಿಸಿಕೊಳ್ಳಬೇಕು ಎಂದು ಈ ನಿಯಮ ಹೇಳುತ್ತದೆ. ವಿಮಾ ಪಾಲಿಸಿ ಅಳವಡಿಸಿಕೊಳ್ಳಬೇಕಾದರೆ ಇಂಡಿಯನ್ ಟ್ರಸ್ಟ್‌ ಕಾಯ್ದೆ-1882ರ ಅಡಿಯಲ್ಲಿ ಗ್ರ್ಯಾಚುಟಿ ಟ್ರಸ್ಟ್‌ ಸ್ಥಾಪಿಸಬೇಕು. ಹೀಗಿದ್ದಾಗ 10ಕ್ಕಿಂತ ಹೆಚ್ಚು ಉದ್ಯೋಗಿಗಳು ಇರುವ ಸಂಸ್ಥೆಗಳಿಗೆ ಗ್ರ್ಯಾಚುಟಿ ಟ್ರಸ್ಟ್‌ ಸ್ಥಾಪಿಸುವ ಹೊರೆ ಬೀಳಲಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಉದ್ಯೋಗದಾತರೊಂದಿಗೆ ಸಮಾಲೋಚಿಸದೆ ಏಕಾಏಕಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಅವುಗಳನ್ನು ಅಳವಡಿಸಿಕೊಂಡರೆ ಹೋಟೆಲ್‌ಗಳು ಹಾಗೂ ಇತರ ಕಿರು ಉದ್ಯೋಗದಾತರು ಆರ್ಥಿಕ ಅಸ್ಥಿರತೆಗೆ ಒಳಗಾಗಲಿದ್ದಾರೆ. ಸರ್ಕಾರದ ಅಧಿಸೂಚನೆಯಲ್ಲಿ ಹಲವು ಕಾನೂನಿನ ಲೋಪದೋಷಗಳಿವೆ. ವಿವೇಚನೆ ಬಳಸದೆ ನಿಯಮ ಜಾರಿಗೆ ತರಲಾಗಿದೆ. ಆದ್ದರಿಂದ, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Articles

Comments (0)

Leave a Comment